ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ | ಈಡಿಯಿಂದ ನೀರವ್ ಮೋದಿಯ 29.75 ಕೋಟಿ ರೂ. ಮೌಲ್ಯದ ಸೊತ್ತು ಮುಟ್ಟುಗೋಲು
ಹೊಸದಿಲ್ಲಿ : ನೀರವ್ ಮೋದಿ ಪಂಜಾಬ್ ನ್ಯಾಷನಲ್ ಪಂಜಾಬ್ ಬ್ಯಾಂಕ್‌ಗೆ 6,498.20 ಕೋಟಿ ರೂ. ವಂಚಿಸಿದ ಪ್ರಕರಣದಲ್ಲಿ ಅಪರಾಧ ಆದಾಯದ ರೂಪದಲ್ಲಿದ್ದ ಸ್ಥಿರಾಸ್ಥಿ ಹಾಗೂ ಬ್ಯಾಂಕ್ ಬ್ಯಾಲೆನ್ಸ್ ಸೇರಿದಂತೆ ಒಟ್ಟು 29.75 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಬುಧವಾರ ಮುಟ್ಟುಗೋಲು ಹಾಕಿಕೊಂಡಿದೆ.
ಈ ಆಸ್ತಿಯನ್ನು ಜಾರಿ ನಿರ್ದೇಶನಾಲಯದ ಮುಂಬೈ ವಲಯ ಕಚೇರಿ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಈ ಪ್ರಕರಣದಲ್ಲಿ ಸಿಬಿಐ ಭಾರತೀಯ ದಂಡ ಸಂಹಿತೆ, 1860 ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988ರ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಿದ ಎಫ್‌ಐಆರ್‌ನ ಆಧಾರದಲ್ಲಿ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿತ್ತು.
ತನಿಖೆಯ ಸಂದರ್ಭ ಭಾರತದಲ್ಲಿ ನೀರವ್ ಮೋದಿ ಹಾಗೂ ಅವರ ಕಂಪೆನಿಗಳ ಸಮೂಹದ ಭೂಮಿ ಹಾಗೂ ಕಟ್ಟಡದ ರೂಪದಲ್ಲಿದ್ದ ಸೊತ್ತು ಹಾಗೂ ಬ್ಯಾಂಕ್ ಬ್ಯಾಲೆನ್ಸ್ ಸೇರಿದಂತೆ ಒಟ್ಟು 29.75 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಯಿತು. ಇದನ್ನು ಪಿಎಂಎಲ್‌ಎ 2002ರ ಅಡಿಯಲ್ಲಿ ಔಪಚಾರಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಯಿತು ಎಂದು ಜಾರಿ ನಿರ್ದೇಶನಾಯ ತಿಳಿಸಿದೆ.