ಜೈಲಿನಲ್ಲಿ ಲಾರೆನ್ಸ್ ಬಿಷ್ಣೋಯಿ ಟಿವಿ ಸಂದರ್ಶನ ಅಪರಾಧದ ವೈಭವೀಕರಣ | ಪಂಜಾಬ್ ಪೊಲೀಸರಿಗೆ ಹೈಕೋರ್ಟ್ ತರಾಟೆ

Update: 2024-10-30 14:57 GMT

 ಲಾರೆನ್ಸ್ ಬಿಷ್ಣೋಯಿ | PC : PTI 

ಹೊಸದಿಲ್ಲಿ : ಕುಖ್ಯಾತ ಗ್ಯಾಂಗ್‌ ಸ್ಟರ್ ಲಾರೆನ್ಸ್ ಬಿಷ್ಣೋಯಿ 2022ರಲ್ಲಿ ಪಂಜಾಬ್‌ನ ಜೈಲಿನಲ್ಲಿದ್ದಾಗ ಆತನಿಗೆ ಟಿವಿ ಸಂದರ್ಶನವೊಂದನ್ನು ನೀಡುವುದಕ್ಕಾಗಿ ಸ್ಟುಡಿಯೋದಂತಹ ಸೌಕರ್ಯವನ್ನು ಒದಗಿಸಿದ್ದಕ್ಕಾಗಿ ಪಂಜಾಬ್ ಪೊಲೀಸರನ್ನು ಬುಧವಾರ ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

2022ರ ಸೆಪ್ಟೆಂಬರ್‌ನಲ್ಲಿ ಜೈಲಿನಲ್ಲಿ ಟಿವಿ ಸಂದರ್ಶನವನ್ನು ನಡೆಸಲು ನೆರವಾದ ಹಿರಿಯ ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಿರಿಯ ಪೊಲೀಸರಿಗೆ ನಿರ್ದೇಶನ ನೀಡಿದ ಆಗಸ್ಟ್ 2024ರ ಆದೇಶವನ್ನು ಅನುಸರಿಸಲು ವಿಫಲವಾಗಿರುವುದಕ್ಕಾಗಿ ಪಂಜಾಬ್ ಸರಕಾರದ ವಿರುದ್ಧವೂ ನ್ಯಾಯಮೂರ್ತಿಗಳಾದ ಅನುಪಿಂದರ್ ಸಿಂಗ್ ಗ್ರೆವಾಲ್ ಹಾಗೂ ಲಪಿಕಾ ಬ್ಯಾನರ್ಜಿ ಅವರನ್ನೊಳಗೊಂಡ ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿದೆ.

‘‘ಬಿಷ್ಣೋಯಿಯ ಸಂದರ್ಶನವನ್ನು ನಡೆಸುವುದಕ್ಕೆ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಯವರ ಕಚೇರಿಯನ್ನು ಬಳಸಿಕೊಳ್ಳಲಾಗಿತ್ತು. ಅಪರಾಧ ತನಿಖಾ ಏಜೆನ್ಸಿ (ಸಿಐಎ)ಯ ಸಿಬ್ಬಂದಿಗೆ ಇರುವ ಅಧಿಕೃತ ವೈಫೈ ವ್ಯವಸ್ಥೆಯನ್ನು ಬಳಸಿಕೊಂಡು ಸಂದರ್ಶನವನ್ನು ನಡೆಸಿರುವುದಕ್ಕೆ ಒದಗಿಸಿರುವುದು, ಇದೊಂದು ಕ್ರಿಮಿನಲ್ ಸಂಚಿನ ಪ್ರಕರಣವೆಂಬುದನ್ನು ಬೆಟ್ಟುಮಾಡಿ ತೋರಿಸುತ್ತದೆ. ಕಾರಾಗೃಹದ ಸಂದರ್ಶಕರ ಕುರಿತಾದ ವಿವರಗಳನ್ನು ದಾಖಲಿಸುವ ಡೈರಿಯನ್ನು ಕೂಡಾ ಫೋರ್ಜರಿ ಮಾಡಲಾಗಿದೆ’’ ಎಂದು ವರದಿ ಆಪಾದಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ತನಿಖೆ ನಡೆಯಬೇಕಾದ ಅಗತ್ಯವಿದೆಯೆಂದು ನ್ಯಾಯಾಲಯ ಪ್ರತಿಪಾದಿಸಿದೆ. ಇತರ ಅಪರಾಧಗಳ ಬಗ್ಗೆ ಪರಿಶೀಲನೆ ನಡೆಸುವ ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿ ಇನ್ನಷ್ಟು ತನಿಖೆ ನಡೆಯಬೇಕಾದ ಅಗತ್ಯವಿದೆಯೆಂದು ಅದು ಹೇಳಿದೆ.

ಈ ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಶಾಮೀಲಾಗಿರುವುದು, ಕ್ರಿಮಿನಲ್ ವ್ಯಕ್ತಿಯಿಂದ ಅಥವಾ ಆತನ ಸಹಚರರಿಂದ ಲಂಚ ಪಡೆದಿರುವುದನ್ನು ಸೂಚಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. ಈ ಬಗ್ಗೆ ಪೊಲೀಸ್ ಇಲಾಕೆಯ ವಿಶೇಷ ಮಹಾನಿರ್ದೇಶಕ ಪ್ರಭೋದ್ ಕುಮಾರ್ ನೇತೃತ್ವದ ತ್ರಿಸದಸ್ಯ ತಂಡದಿಂದ ಹೊಸತಾಗಿ ತನಿಖೆ ನಡೆಸುವಂತೆಯೂ ನ್ಯಾಯಾಲಯ ಆದೇಶಿಸಿದೆ.

ಪಂಜಾಬ್‌ನ ಜೈಲಿನಲ್ಲಿ ಬಿಷ್ಣೋಯಿ ಟಿವಿ ಸಂದರ್ಶನದ ವ್ಯವಸ್ಥೆ ಮಾಡಿರುವುದು ಅಪರಾಧದ ಹಾಗೂ ಅಪರಾಧಿಗಳ ವೈಭವೀಕರಣವಾಗಿದೆ. ಎಂದು ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ರಚಿಸಿದ ಸಿಟ್ ಆಯೋಗವು ವರದಿಲ್ಲಿ ತಿಳಿಸಿದ ಬಳಿಕ ಈ ಬೆಳವಣಿಗೆಯಾಗಿದೆ.

ಪಂಜಾಬಿ ಗಾಯಕ ಸಿಧ್ ಮೂಸೆವಾಲಾ ಹತ್ಯೆ ಪ್ರಕರಣದ ವಿಚಾರಣೆಗಾಗಿ ಆತ ಪಂಜಾಬ್‌ ನ ಖರಾರ್‌ ನಲ್ಲಿರುವ ಅಪರಾಧ ತನಿಖಾ ಏಜೆನ್ಸಿ (ಸಿಐಎ)ಯ ಸೆಲ್‌ ನಲ್ಲಿದ್ದಾಗ ಆತನ ಮೊದಲ ಟಿವಿ ಸಂದರ್ಶನ ನಡೆದಿತ್ತು. ಎರಡನೇ ಟಿವಿ ಸಂದರ್ಶನವನ್ನು ರಾಜಸ್ಥಾನದ ಜೈಪುರದ ಜೈಲಿನಲ್ಲಿದ್ದಾಗ ನಡೆಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News