ನೀಟ್-ಯುಜಿ ಪರೀಕ್ಷೆಯ ದಿನ ಪ್ರಶ್ನೆಪತ್ರಿಕೆಯನ್ನು ಕಳವು ಮಾಡಲಾಗಿತ್ತು : ಸಿಬಿಐ
ಹೊಸದಿಲ್ಲಿ : ನೀಟ್-ಯುಜಿ 2024ರ ಪ್ರಶ್ನೆಪತ್ರಿಕೆಯನ್ನು ಪರೀಕ್ಷೆಯ ದಿನವಾಗಿದ್ದ ಮೇ 5ರಂದು ಬೆಳಿಗ್ಗೆ ಜಾರ್ಖಂಡ್ನ ಹಜಾರಿಬಾಗ್ನಲ್ಲಿಯ ಒಯಾಸಿಸ್ ಶಾಲೆಯಿಂದ ಕಳವು ಮಾಡಲಾಗಿತ್ತು ಎಂದು ಸಿಬಿಐ ತಿಳಿಸಿದೆ.
ನೀಟ್-ಯುಜಿ ಪರೀಕ್ಷೆಯನ್ನು ದೇಶಾದ್ಯಂತ 4,751 ಕೇಂದ್ರಗಳಲ್ಲಿ ನಡೆಸಲಾಗಿದ್ದು, ಸುಮಾರು 24 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.
ಜೂ.4ರಂದು ಪರೀಕ್ಷೆಯ ಫಲಿತಾಂಶಗಳು ಪ್ರಕಟಗೊಂಡ ಬಳಿಕ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಇತರ ಅಕ್ರಮಗಳನ್ನು ಆರೋಪಿಸಲಾಗಿದ್ದು,ಸಿಬಿಐ ಜೂ.22ರಂದು ಎಫ್ಐಆರ್ ದಾಖಲಿಸಿಕೊಂಡಿತ್ತು.
ಪ್ರಶ್ನೆಪತ್ರಿಕೆಯನ್ನು ಕದ್ದ ಬಳಿಕ ಎಂಬಿಬಿಎಸ್ ವಿದ್ಯಾರ್ಥಿಗಳ ಗುಂಪೊಂದು ಸರಿಯಾದ ಉತ್ತರಗಳೊಂದಿಗೆ ಅದನ್ನು ಬಿಡಿಸಿತ್ತು ಮತ್ತು ಆರೋಪಿಗಳಿಗೆ ಹಣವನ್ನು ನೀಡಿದ್ದ ಕೆಲವು ಆಯ್ದ ವಿದ್ಯಾರ್ಥಿಗಳೊಂದಿಗೆ ಅದನ್ನು ಹಂಚಿಕೊಳ್ಳಲಾಗಿತ್ತು ಎಂದು ಸಿಬಿಐ ಗುರುವಾರ ತಿಳಿಸಿತು.
ಸಂಚಿನ ಭಾಗವಾಗಿ ಈ ವಿದ್ಯಾರ್ಥಿಗಳ ಗುಂಪನ್ನು ಹಜಾರಿಬಾಗ್ಗೆ ವಿಶೇಷವಾಗಿ ಕರೆತರಲಾಗಿತ್ತು. ಬಿಡಿಸಲಾಗಿದ್ದ ಪ್ರಶ್ನೆಪತ್ರಿಕೆಯನ್ನು ಪಡೆದಿದ್ದ ಅಭ್ಯರ್ಥಿಗಳನ್ನು ಗುರುತಿಸಲಾಗುತ್ತಿದೆ ಮತ್ತು ಅವರ ವಿರುದ್ಧ ಅಗತ್ಯ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಸಿಬಿಐ ಹೇಳಿತು.
ಪ್ರಶ್ನೆಪತ್ರಿಕೆಗಳನ್ನು ಬಿಡಿಸಿದ್ದ ಈ ‘ಸಾಲ್ವರ್ಗಳು’ ಏಮ್ಸ್-ಪಾಟ್ನಾ,ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ರಾಜಸ್ಥಾನದ ಇನ್ನೊಂದು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಈ ಪೈಕಿ ಏಳು ಜನರನ್ನು ಬಂಧಿಸಲಾಗಿದೆ.
ಹಜಾರಿಬಾಗ್ನ ಒಯಾಸಿಸ್ ಶಾಲೆಯ ಕೇಂದ್ರದಲ್ಲಿ ಪರೀಕ್ಷೆಯನ್ನು ಬರೆದಿದ್ದ 23 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕಗಳನ್ನು ಪಡೆದಿದ್ದರು.
ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ರೂವಾರಿಗಳಲ್ಲೊಬ್ಬನಾಗಿರುವ ಪಂಕಜಕುಮಾರ ಒಯಾಸಿಸ್ ಶಾಲೆಯಿಂದ ಪ್ರಶ್ನೆಪತ್ರಿಕೆಯನ್ನು ಕದ್ದಿದ್ದ ಮತ್ತು ಹಜಾರಿಬಾಗ್ನ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಸಿಟಿ ಕೋಆರ್ಡಿನೇಟರ್ ಆಗಿದ್ದ ಶಾಲೆಯ ಪ್ರಾಂಶುಪಾಲ ಎಹ್ಸಾನುಲ್ ಹಕ್,ಪರೀಕ್ಷಾ ಕೇಂದ್ರದ ಅಧೀಕ್ಷಕರಾಗಿದ್ದ ಶಾಲೆಯ ಉಪಪ್ರಾಂಶುಪಾಲ ಇಮ್ತಿಯಾಜ್ ಆಲಂ ಮತ್ತು ಹಜಾರಿಬಾಗ್ನ ಇನ್ನೋರ್ವ ಸಹವರ್ತಿ ಇದರಲ್ಲಿ ಶಾಮೀಲಾಗಿದ್ದರು ಎಂದು ಸಿಬಿಐ ತಿಳಿಸಿದರು.
ಪಂಕಕ್ ಕುಮಾರ್ ನನ್ನು ಮಂಗಳವಾರ ಬಂಧಿಸಲಾಗಿದ್ದರೆ, ಹಕ್ ಮತ್ತು ಆಲಂ ಅವರನ್ನು ಜೂ.28ರಂದು ಬಂಧಿಸಲಾಗಿತ್ತು.
ಪ್ರಶ್ನೆಪತ್ರಿಕೆಗಳ ಅರ್ಧ ಸುಟ್ಟಿದ್ದ ಚೂರುಗಳು ಸಿಬಿಐ ಅನ್ನು ಅದು ಸೋರಿಕೆಯಾಗಿದ್ದ ನಿಯೋಜಿತ ನೀಟ್ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದಿದ್ದವು. ನೀಟ್-ಯುಜಿ ಪ್ರಶ್ನೆಪತ್ರಿಕೆಗಳಿದ್ದ ಟ್ರಂಕ್ಗಳನ್ನು ಮೇ 5ರಂದು ಬೆಳಿಗ್ಗೆ ಶಾಲೆಗೆ ತಂದು ನಿಯಂತ್ರಣ ಕೊಠಡಿಯಲ್ಲಿ ಇರಿಸಲಾಗಿತ್ತು. ಕೆಲವೇ ನಿಮಿಷಗಳ ಬಳಿಕ ಹಕ್ ಮತ್ತು ಆಲಂ ಈ ಕೊಠಡಿಯನ್ನು ಅಕ್ರಮವಾಗಿ ಪ್ರವೇಶಿಸಲು ಪಂಕಜ್ ಕುಮಾರ್ ಗೆ ಅವಕಾಶ ಕಲ್ಪಿಸಿದ್ದರು. ಟ್ರಂಕ್ನ್ನು ತೆರೆದು ಪ್ರಶ್ನೆಪತ್ರಿಕೆಗಳನ್ನು ಕಳವು ಮಾಡಲು ಬಳಸಲಾಗಿದ್ದ ಅತ್ಯಾಧುನಿಕ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ತಿಳಿಸಿದೆ.