ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಮುಂದುವರಿಕೆ?
ಹೊಸದಿಲ್ಲಿ: ಏಕದಿನ ವಿಶ್ವಕಪ್ ಟೂರ್ನಿ ಮುಕ್ತಾಯವಾದ ಒಂದು ವಾರದೊಳಗೆ ಆರಂಭವಾಗಲಿರುವ ಆಸ್ಟ್ರೇಲಿಯ ವಿರುದ್ಧದ ಐದು ಪಂದ್ಯಗಳ ಟಿ-20 ಅಂತರ್‌ರಾಷ್ಟ್ರೀಯ ಸರಣಿಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಭಾರತ ತಂಡದ ಉಸ್ತುವಾರಿ ವಹಿಸಬಹುದು. ವಿಶ್ವಕಪ್ ಅಂತ್ಯದ ವೇಳೆಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ 2 ವರ್ಷಗಳ ಒಪ್ಪಂದವು ಕೊನೆಯಾಗಲಿದೆ. ಮಾಜಿ ನಾಯಕನಿಗೆ ಅರ್ಜಿ ಸಲ್ಲಿಸಲು ವಿನಂತಿಸುವ ಆಯ್ಕೆಯನ್ನು ಬಿಸಿಸಿಐ ಹೊಂದಿದೆ. ಮಂಡಳಿಯ ನಿಯಮ ಅನುಸಾರ ಕೋಚ್ ಹುದ್ದೆಗೆ ಅರ್ಜಿಗಳನ್ನು ಮರು ಆಹ್ವಾನಿಸಲಾಗುತ್ತದೆ.
ವ್ಯಾಪಕ ಪ್ರಯಾಣ ಹಾಗೂ ನಿರಂತರ ಒತ್ತಡವಿರುವ ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಯಲ್ಲಿ 51ರ ಹರೆಯದ ದ್ರಾವಿಡ್ ಮುಂದುವರಿಯಲಿದ್ದಾರೆಯೇ ಎಂಬ ಕುತೂಹಲ ಎಲ್ಲರಲ್ಲಿದೆ. ಈ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ ರಾಯಲ್ಸ್‌ಗಳಂತಹ ಐಪಿಎಲ್ ತಂಡಗಳಿಗೆ ಕೋಚ್ ಆಗಿದ್ದ ದ್ರಾವಿಡ್ 10 ತಂಡಗಳಿರುವ ಐಪಿಎಲ್ ಟಿ-20 ಲೀಗ್‌ಗೆ ವಾಪಸಾಗುವ ಸಾಧ್ಯತೆಯಿದೆ.
ರಾಹುಲ್ ದ್ರಾವಿಡ್ ವಿಶ್ರಾಂತಿ ಪಡೆದಾಗಲೆಲ್ಲಾ ವಿವಿಎಸ್ ಲಕ್ಷ್ಮಣ್ ಯಾವಾಗಲೂ ತಂಡದ ಕೋಚ್ ಉಸ್ತುವಾರಿ ವಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ವಿಶ್ವಕಪ್‌ನ ನಂತರ ಆಸ್ಟ್ರೇಲಿಯ ವಿರುದ್ಧ ಸರಣಿಗೆ ಲಕ್ಷ್ಮಣ್ ತಂಡದೊಂದಿಗೆ ತೆರಳುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ.
ಒಂದು ವೇಳೆ ಮುಖ್ಯ ಕೋಚ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದರೆ ಲಕ್ಷ್ಮಣ್ ಪ್ರಬಲ ಅಭ್ಯರ್ಥಿಯಾಗಲಿದ್ದಾರೆ. ಎನ್‌ಸಿಎ ಅಧ್ಯಕ್ಷರಿಗೆ ಒಳ-ಹೊರಗಿನ ವ್ಯವಸ್ಥೆಯ ಅರಿವಿರುತ್ತದೆ.
ಆಸ್ಟ್ರೇಲಿಯ ವಿರುದ್ಧದ 5 ಪಂದ್ಯಗಳ ಟ್ವೆಂಟಿ-20 ಸರಣಿಯು ನವೆಂಬರ್ 23ರಿಂದ ವಿಶಾಖಪಟ್ಟಣದಲ್ಲಿ ಆರಂಭವಾಗಲಿದೆ.