ಸಂಸದ ಸ್ಥಾನ ಮರಳಿ ಪಡೆದ ಬೆನ್ನಲ್ಲೇ ಸರಕಾರಿ ಬಂಗಲೆ ಮರಳಿ ಪಡೆದ ರಾಹುಲ್ ಗಾಂಧಿ
Update: 2023-08-08 12:10 GMT
ಹೊಸದಿಲ್ಲಿ: ಸಂಸದ ಸ್ಥಾನಮಾನ ಮರಳಿ ಪಡೆದ ಬಳಿಕ ಸಂಸದ ರಾಹುಲ್ ಗಾಂಧಿ ಅವರಿಗೆ ತುಘಲಕ್ ಲೇನ್ ಬಂಗಲೆಯನ್ನು ಮರುಹಂಚಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಮೋದಿ ಉಪನಾಮ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಘೋಷನೆಯಾಗಿ ಎರಡು ವರ್ಷಗಳ ಕಾಲ ಶಿಕ್ಷೆಗೆ ಗುರಿಯಾದ ಬೆನ್ನಲ್ಲೇ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವವನ್ನು ರದ್ದುಪಡಿಸಲಾಗಿತ್ತು. ಪರಿಣಾಮ 19 ವರ್ಷಗಳ ಕಾಲ ಅವರು ನೆಲೆಸಿದ್ದ ತುಘಲಕ್ ಲೇನ್ ನಲ್ಲಿದ್ದ ಬಂಗಲೆಯಿಂದ ಅವರನ್ನು ಖಾಲಿ ಮಾಡಿಸಲಾಗಿತ್ತು.
ರಾಹುಲ್ ಗಾಂಧಿ ಇಂದು ತಮ್ಮ ಹಳೆಯ ಬಂಗಲೆಗೆ ಮರಳಲಿದ್ದು, ಈ ವೇಳೆ ಹಳೆಯ ಮನೆಗೆ ಮರಳುತ್ತಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ʼಇಡೀ ಹಿಂದುಸ್ತಾನವೇ ನನ್ನ ಮನೆʼ ಎಂದಿದ್ದಾರೆ.
ಸೋಮವಾರ, ಮಾನನಷ್ಟ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್ ಗಾಂಧಿಯವರ ಶಿಕ್ಷೆಗೆ ತಡೆ ನೀಡಿದ ನಂತರ ಲೋಕಸಭೆಯ ಸೆಕ್ರೆಟರಿಯೇಟ್ ಅವರು ಸಂಸತ್ ಸದಸ್ಯತ್ವವನ್ನು ಪುನಃಸ್ಥಾಪಿಸಿದ್ದರು.