ಟೊಮೊಟೊ ದುಬಾರಿ ಬೆಲೆಯಿಂದ ಕಣ್ಣೀರು ಹಾಕಿದ್ದ ತರಕಾರಿ ವ್ಯಾಪಾರಿಗೆ ತಮ್ಮ ಮನೆಯಲ್ಲಿ ಔತಣ ಕೂಟ ನೀಡಿದ ರಾಹುಲ್ ಗಾಂಧಿ

Update: 2023-08-14 18:23 GMT

ರಾಹುಲ್ ಗಾಂಧಿ | Photo : PTI 

ಹೊಸದಿಲ್ಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಿದ್ಧಿ ಗಳಿಸಿರುವ ತರಕಾರಿ ವ್ಯಾಪಾರಿ ರಾಮೇಶ್ವರ್ ಅವರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿರುವ ರಾಹುಲ್ ಗಾಂಧಿ, ಅವರಿಗೆ ಔತಣ ಕೂಟ ನೀಡಿದ್ದಾರೆ. ರಾಮೇಶ್ವರ್ ರೊಂದಿಗಿನ ತಮ್ಮ ಫೋಟೊವನ್ನು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ, ಅವರ ಚಲನಶೀಲ ವ್ಯಕ್ತಿತ್ವವನ್ನು ಶ್ಲಾಘಿಸಿದ್ದು, ಅವರು ಸವಾಲುಗಳನ್ನು ಶಾಂತಚಿತ್ತವಾಗಿ ಎದುರಿಸುತ್ತಿರುವ ಲಕ್ಷಾಂತರ ಭಾರತೀಯರ ಪ್ರತಿನಿಧಿ ಎಂದು ಬಣ್ಣಿಸಿದ್ದಾರೆ.

‘The Lallantop’ ನಲ್ಲಿ ಪ್ರಸಾರವಾಗಿದ್ದ ಸಂದರ್ಶನದಲ್ಲಿ ರಾಮೇಶ್ವರ್ ಟೊಮೆಟೊದ ಬೆಲೆ ಏರಿಕೆ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದರು. ಈ ವಿಡಿಯೊ ಜುಲೈನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದರ ಬೆನ್ನಿಗೇ ಬಿಡುಗಡೆಯಾಗಿದ್ದ ಮತ್ತೊಂದು ವಿಡಿಯೊದಲ್ಲಿ, ರಾಹುಲ್ ಗಾಂಧಿಯನ್ನು ಭೇಟಿಯಾಗುವ ಇಚ್ಛೆಯನ್ನು ರಾಮೇಶ್ವರ್ ವ್ಯಕ್ತಪಡಿಸಿದ್ದರು.

ರಾಮೇಶ್ವರ್ ರೊಂದಿಗಿನ ತಮ್ಮ ವಿಡಿಯೊವನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, “ರಾಮೇಶ್ವರ್ ಜೀ ಓರ್ವ ಉತ್ಸಾಹಭರಿತ ವ್ಯಕ್ತಿ. ಯಾರಾದರೂ ಅವರಲ್ಲಿ ಕೋಟ್ಯಂತರ ಭಾರತೀಯರ ಜನ್ಮಜಾತ ವ್ಯಕ್ತಿತ್ವವನ್ನು ನೋಡಬಹುದು. ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ನಗುತ್ತಾ ಮುಂದೆ ಸಾಗುವವರೇ ನೈಜ “ಭಾರತ ಭಾಗ್ಯ ವಿಧಾತರು” ಎಂದು ಬರೆದುಕೊಂಡಿದ್ದಾರೆ.

ದಿಲ್ಲಿಯ ಆಝಾದ್ ಪುರ್ ಮಾರುಕಟ್ಟೆಯ ತರಕಾರಿ ವ್ಯಾಪಾರಿಯೊಬ್ಬರು ಕಣ್ಣೀರು ಸುರಿಸುತ್ತಿರುವ ವಿಡಿಯೊವನ್ನು ಜುಲೈ ತಿಂಗಳಲ್ಲಿ ರಾಹುಲ್ ಗಾಂಧಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೊದಲ್ಲಿ ಕಣ್ಣೀರಾಗಿದ್ದ ರಾಮೇಶ್ವರ್, ಟೊಮೆಟೊದ ದುಬಾರಿ ಬೆಲೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದರು ಹಾಗೂ ಹಣದುಬ್ಬರದಿಂದ ಅವುಗಳನ್ನು ಕೊಳ್ಳಲು ತಾನು ಎಷ್ಟು ಪರದಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ಒಂದು ವೇಳೆ ಮಳೆಯಿಂದ ಟೊಮೆಟೊ ಸಂಗ್ರಹಕ್ಕೇನಾದರೂ ಹಾನಿಯಾದರೆ ನಾನು ಭಾರಿ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಅವರು ಆತಂಕ ತೋಡಿಕೊಂಡಿದ್ದರು.

ಆ ವಿಡಿಯೊವನ್ನು ಹಂಚಿಕೊಂಡಿದ್ದ ರಾಹುಲ್ ಗಾಂಧಿ, ನೀತಿಗಳನ್ನು ನಿರೂಪಿಸುತ್ತಿರುವ ಬಲಿಷ್ಠ ವ್ಯಕ್ತಿಗಳು ಹಾಗೂ ಮೂಲಭೂತ ವಸ್ತುಗಳ ಬೆಲೆಯೇರಿಕೆಯ ಸವಾಲನ್ನು ಎದುರಿಸುತ್ತಿರುವ ಸಾಮಾನ್ಯ ಭಾರತೀಯರು ವಿಭಜನೆಗೊಂಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದರು. ಸಿರಿವಂತರು ಹಾಗೂ ಬಡವರ ನಡುವೆ ಸೇತುವೆಯೊಂದನ್ನು ನಿರ್ಮಿಸಿ, ಅವರ ಸಮಸ್ಯೆಗಳನ್ನು ಬಗೆಹರಿಸಬೇಕಾದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News