“ದ್ವಾರಕೆಯಲ್ಲಿ ನೀರಿನಡಿ ಪೂಜೆ ಮಾಡಿರುವುದನ್ನು ರಾಹುಲ್ ಗಾಂಧಿ ತಮಾಷೆ ಮಾಡಿದ್ದಾರೆ”: ಚುನಾವಣಾ ಪ್ರಚಾರ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ
ಅಮ್ರೋಹ (ಉತ್ತರಪ್ರದೇಶ): ನಾನು ಇತ್ತೀಚೆಗೆ ಗುಜರಾತ್ ನ ದ್ವಾರಕೆಯಲ್ಲಿ ನೀರಿನಡಿಯಲ್ಲಿ ಪೂಜೆ ಮಾಡಿರುವುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತನ್ನ ‘‘ಮತ ಬ್ಯಾಂಕ್’’ಗಾಗಿ ಲೇವಡಿ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿಕೊಂಡಿದ್ದಾರೆ.
ಉತ್ತರಪ್ರದೇಶದ ಅಮ್ರೋಹದಲ್ಲಿ ಚುನಾವಣಾ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘‘ಕಾಂಗ್ರೆಸ್ ನ ಶೆಹಝಾದ (ಯುವರಾಜ) ನನ್ನ ನಂಬಿಕೆಗಳ ಮೇಲೆ ಸವಾರಿ ಮಾಡಿದ್ದಾರೆ ಎಂದು ಆರೋಪಿಸಿದರು.
‘‘ಪುರಾತನಶಾಸ್ತ್ರಜ್ಞರು ದ್ವಾರಕೆಯನ್ನು ಸಮುದ್ರದಡಿಯಲ್ಲಿ ಪತ್ತೆ ಹಚ್ಚಿದ್ದಾರೆ. ನಾನು ದ್ವಾರಕೆಯಲ್ಲಿ ಸಮುದ್ರದಡಿ ಹೋಗಿ ಪೂಜೆ ಮಾಡಿದೆ. ಆದರೆ, ಸಮುದ್ರದಲ್ಲಿ ಪೂಜೆ ಮಾಡುವುದರಿಂದ ಏನೂ ಪ್ರಯೋಜನವಿಲ್ಲ ಎಂದು ಶೆಹಝಾದ ಹೇಳುತ್ತಾರೆ. ಈ ಜನರು, ಕೇವಲ ಮತ ಬ್ಯಾಂಕ್ ಗಾಗಿ ಸಾವಿರಾರು ವರ್ಷ ಹಳೆಯ ನನ್ನ ಸಂಸ್ಕೃತಿ, ನನ್ನ ನಂಬಿಕೆಗಳನ್ನು ನಿರಾಕರಿಸುತ್ತಾರೆ’’ ಎಂದು ದೇಶದ ಪ್ರಧಾನಿ ಹೇಳಿದರು.
ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ನ ಮಿತ್ರಪಕ್ಷ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧವೂ ವಾಗ್ದಾಳಿ ನಡೆಸಿದರು.
‘‘ತಮ್ಮನ್ನು ಯದುವಂಶಿ ಎಂದು ಕರೆದುಕೊಳ್ಳುತ್ತಿರುವವರನ್ನು ನಾನು ಕೇಳಬಯಸುತ್ತೇನೆ- ನೀವು ನಿಜವಾಗಿಯೂ ಯದುವಂಶಿಯಾಗಿದ್ದರೆ, ಅದನ್ನು ಅವಮಾನಿಸುತ್ತಿರುವ ಪಕ್ಷವೊಂದರ ಜೊತೆಗೆ ನೀವು ಹೇಗೆ ಕುಳಿತುಕೊಂಡಿದ್ದೀರಿ’’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ರಾಹುಲ್ ಗಾಂಧಿ ಏನು ಹೇಳಿದ್ದರು?
‘‘ಕೃಷಿ ಬಿಕ್ಕಟ್ಟು, ಹಣದುಬ್ಬರ, ನಿರುದ್ಯೋಗ, ಅಗ್ನಿವೀರರ ತೊಳಲಾಟಗಳು ಇಂದಿನ ಭಾರತದ ಅತ್ಯಂತ ಪ್ರಮುಖ ಸಮಸ್ಯೆಗಳು. ಆದರೆ, ಈ ವಿಷಯಗಳ ಬಗ್ಗೆ ಟಿವಿ ಚಾನೆಲ್ ಗಳಲ್ಲಿ ಚರ್ಚೆ ಕಾಣಸಿಗುವುದಿಲ್ಲ. ಬದಲಿಗೆ, ಟಿವಿ ಚಾನೆಲ್ ಗಳು ಮೋದೀಜಿಯನ್ನು 24 ಗಂಟೆಗಳ ಕಾಲ ತೋರಿಸುತ್ತವೆ. ಅವರು ಪೂಜೆ ಮಾಡಲು ಸಮುದ್ರದಡಿಗೆ ಹೋಗುವಾಗಲೂ ಟಿವಿ ಕ್ಯಾಮರಗಳು ಅವರೊಂದಿಗೆ ಹೋಗುತ್ತವೆ’’ ಎಂದು ರಾಹುಲ್ ಗಾಂಧಿ ಹೇಳಿದ್ದರು.