ತನ್ನ ತಲೆಗೂದಲು ಹಾಗೂ ಗಡ್ಡವನ್ನು ಟ್ರಿಮ್ ಮಾಡಿದ್ದ ಕ್ಷೌರಿಕನಿಗೆ ಉಡುಗೊರೆ ರವಾನಿಸಿದ ರಾಹುಲ್ ಗಾಂಧಿ

Update: 2024-09-14 08:09 GMT
Photo:X@INCIndia

ರಾಯ್ ಬರೇಲಿ (ಉತ್ತರ ಪ್ರದೇಶ): ಸುಮಾರು ಮೂರು ತಿಂಗಳ ಹಿಂದೆ ಲೋಕಸಭಾ ಚುನಾವಣಾ ಪ್ರಚಾರಕ್ಕೆ ತೆರಳಿದ್ದಾಗ, ತನ್ನ ತಲೆಗೂದಲು ಹಾಗೂ ಗಡ್ಡವನ್ನು ಟ್ರಿಮ್ ಮಾಡಿದ್ದ ಇಲ್ಲಿನ ಕ್ಷೌರಿಕನಿಗೆ ರಾಹುಲ್ ಗಾಂಧಿ ಉಡುಗೊರೆಯೊಂದನ್ನು ರವಾನಿಸಿದ್ದಾರೆ. ಈ ಉಡುಗೊರೆಯಲ್ಲಿ ಶಾಂಪೂ ಕುರ್ಚಿ, ತಲೆಗೂದಲು ಕತ್ತರಿಸುವ ಕುರ್ಚಿ ಹಾಗೂ ಇನ್ವರ್ಟರ್ ಸೇರಿವೆ. ರಾಹುಲ್ ಗಾಂಧಿ ತಮಗೆ ರವಾನಿಸಿರುವ ಉಡುಗೊರೆ ಕುರಿತು ಕ್ಷೌರಿಕ ಮಿಥುನ್ ಹರ್ಷ ವ್ಯಕ್ತಪಡಿಸಿದ್ದಾರೆ.

ಕಳೆದ ಮೇ 13ರಂದು ಲೋಕಸಭಾ ಚುನಾವಣಾ ಪ್ರಚಾರದ ಭಾಗವಾಗಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲು ಲಾಲ್ ಗಂಜ್ ಗೆ ಬಂದಿದ್ದ ರಾಹುಲ್ ಗಾಂಧಿ, ಸಭೆ ಮುಗಿದ ನಂತರ ಮಾರ್ಗಮಧ್ಯದಲ್ಲಿ ಮಿಥುನ್ ಅವರ ಕ್ಷೌರದ ಅಂಗಡಿಯಲ್ಲಿ ತಮ್ಮ ತಲೆಗೂದಲು ಹಾಗೂ ಗಡ್ಡವನ್ನು ಟ್ರಿಮ್ ಮಾಡಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಮಿಥುನ್ ರೊಂದಿಗೆ ದೀರ್ಘಕಾಲ ಮಾತುಕತೆಯನ್ನೂ ನಡೆಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಮಿಥುನ್, “ಸುಮಾರು ಮೂರು ತಿಂಗಳಿಗೂ ಹೆಚ್ಚಿನ ಅವಧಿಯ ನಂತರ, ದಿಢೀರನೆ ವಾಹನವೊಂದು ನನ್ನ ಅಂಗಡಿಯ ಮುಂದೆ ನಿಂತಿತು. ಇಬ್ಬರು ನನ್ನ ಅಂಗಡಿಯ ಮುಂದೆ ಎರಡು ಕುರ್ಚಿಗಳು, ಒಂದು ಶಾಂಪೂ ಕುರ್ಚಿ, ಇನ್ವರ್ಟರ್ ಇತ್ಯಾದಿಗಳನ್ನು ಕೆಳಗಿಳಿಸಿದರು ಹಾಗೂ ಅದನ್ನು ನನಗೆ ಹಸ್ತಾಂತರಿಸಿದರು” ಎಂದು ಹೇಳಿದ್ದಾರೆ.

ಈ ವಸ್ತುಗಳನ್ನು ನಿಮಗೆ ರಾಹುಲ್ ಗಾಂಧಿ ಕಳುಹಿಸಿ ಕೊಟ್ಟಿದ್ದಾರೆ ಎಂದು ಮಿಥುನ್ ಗೆ ತಿಳಿಸಲಾಯಿತು ಹಾಗೂ ಮಿಥುನ್ ಈ ಸಹಾಯಕ್ಕಾಗಿ ಹರ್ಷ ಮತ್ತು ಕೃತಜ್ಞತೆಯನ್ನು ಸಲ್ಲಿಸಿದರು ಎಂದು ಕಾಂಗ್ರೆಸ್ ಪಕ್ಷದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜುಲೈ 26ರಂದು ಮಾನಹಾನಿ ಪ್ರಕರಣವೊಂದರಲ್ಲಿ ಲಕ್ನೊದ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಲು ಆಗಮಿಸಿದ್ದ ರಾಹುಲ್ ಗಾಂಧಿ, ರಾಮ್ ಚೇತ್ ಎಂಬ ಚಮ್ಮಾರನ ಅಂಗಡಿ ಬಳಿ ಕೆಲ ಕಾಲ ತಂಗಿ, ಆತನ ಉದ್ಯೋಗ, ಗಳಿಕೆಯ ಕುರಿತು ಮಾಹಿತಿ ಪಡೆದುಕೊಂಡಿದ್ದರು. ಇದಾದ ಕೆಲ ದಿನಗಳ ನಂತರ, ಚಪ್ಪಲಿ ಹೊಲೆಯಲು ಅನುಕೂಲವಾಗುವ ಟೈಲರಿಂಗ್ ಮೆಷಿನ್ ಒಂದನ್ನು ರಾಮ್ ಚೇತ್ ಗೆ ಉಡುಗೊರೆಯಾಗಿ ಕಳಿಸಿಕೊಟ್ಟಿದ್ದರು. ಇದೀಗ ಕ್ಷೌರಿಕ ಮಿಥುನ್ ಗೂ ಉಡುಗೊರೆಯೊಂದನ್ನು ರವಾನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News