ಜು. 8 ರಂದು ಹಿಂಸಾಚಾರ ಪೀಡಿತ ಮಣಿಪುರಕ್ಕೆ ತೆರಳಲಿರುವ ರಾಹುಲ್ ಗಾಂಧಿ; ನಿರಾಶ್ರಿತರ ಕೇಂದ್ರಗಳಿಗೆ ಭೇಟಿ
ಹೊಸದಿಲ್ಲಿ: ಜುಲೈ 8ರಂದು ಹಿಂಸಾಚಾರ ಪೀಡಿತ ಮಣಿಪುರಕ್ಕೆ ಲೋಕಸಭಾ ವಿಪಕ್ಷ ನಾಯಕ ಹಾಗೂ ರಾಯ್ ಬರೇಲಿ ಸಂಸದ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಮೈತೈ ಹಾಗೂ ಕುಕಿ ಸಮುದಾಯಗಳ ನಡುವೆ ಜನಾಂಗೀಯ ಸಂಘರ್ಷ ಸ್ಫೋಟಗೊಂಡ ನಂತರ ಮಣಿಪುರಕ್ಕೆ ರಾಹುಲ್ ಗಾಂಧಿ ನೀಡುತ್ತಿರುವ ಮೂರನೆಯ ಭೇಟಿ ಇದಾಗಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಣಿಪುರ ಕಾಂಗ್ರೆಸ್ ಮುಖ್ಯಸ್ಥ ಕೆ.ಮೇಘಚಂದ್ರ, ದಿಲ್ಲಿಯಿಂದ ಸಿಲ್ಚಾರ್ ಗೆ ವಿಮಾನದಲ್ಲಿ ಪ್ರಯಾಣಿಸಲಿರುವ ರಾಹುಲ್ ಗಾಂಧಿ, ಅಲ್ಲಿಂದ ಜೂನ್ 6ರಂದು ಮತ್ತೆ ಹಿಂಸಾಚಾರ ಸ್ಫೋಟಗೊಂಡಿರುವ ಜಿರಿಬಾಮ್ ಜಿಲ್ಲೆಗೆ ತೆರಳಲಿದ್ದಾರೆ ಎಂದು ತಿಳಿಸಿದ್ದಾರೆ.
“ಇಂಫಾಲದಲ್ಲಿ ಇಳಿದ ನಂತರ, ಅವರು ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿರುವ ಜನರೊಂದಿಗೆ ಸಂವಾದ ನಡೆಸಲು ಚೂರಚಂದ್ಪುಂರ್ ಜಿಲ್ಲೆಗೆ ಭೇಟಿ ನೀಡಲಿದ್ದಾರೆ” ಎಂದು ಅವರು ಹೇಳಿದ್ದಾರೆ.
ಚೂರಚಂದ್ ಪುರ್ ನಿಂದ ಬಿಷ್ಣುಪುರ್ ಜಿಲ್ಲೆಯ ಮೊಯ್ರಂಗ್ ಗೆ ರಸ್ತೆ ಮಾರ್ಗವಾಗಿ ತೆರಳಲಿರುವ ರಾಹುಲ್ ಗಾಂಧಿ, ಅಲ್ಲಿ ಕೆಲವು ಪರಿಹಾರ ಶಿಬಿರಗಳಿಗೆ ಭೇಟಿ ನೀಡಲಿದ್ದಾರೆ. ನಂತರ ಅವರು ದಿಲ್ಲಿಗೆ ಮರಳಲಿದ್ದಾರೆ.
ಈ ಭೇಟಿಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಹಲವು ಮಣಿಪುರ ಕಾಂಗ್ರೆಸ್ ನಾಯಕರನ್ನೂ ಭೇಟಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.