ನೂತನ ಸಂಸತ್ ಭವನದಲ್ಲಿ ಮಳೆ ನೀರು ಸೋರಿಕೆ!

Update: 2024-08-01 06:54 GMT

Screengrab Photo: X/ @yadavakhilesh

ಹೊಸದಿಲ್ಲಿ: ಗುರುವಾರ ಸುರಿದ ಭಾರಿ ಮಳೆಯಿಂದಾಗಿ ನೂತನ ಸಂಸತ್ ಭವನದ ಆವರಣದೊಳಗೆ ನೀರು ಸೋರಿಕೆಯಾಗುತ್ತಿರುವ ಕುರಿತು ಪರಿಶೀಲನೆ ನಡೆಸಲು ವಿಶೇಷ ಸಮಿತಿಯನ್ನು ರಚಿಸಬೇಕು ಎಂಬ ಪ್ರಸ್ತಾವ ಸಲ್ಲಿಸಿರುವ ಕಾಂಗ್ರೆಸ್ ಸಂಸದ ಮಾನಿಕಮ್ ಠಾಗೋರ್, ಲೋಕಸಭೆಯಲ್ಲಿ ಕಲಾಪ ಮುಂಡೂಡಿಕೆ ನಿರ್ಣಯವನ್ನು ಮಂಡಿಸಿದ್ದಾರೆ ಎಂದು hindustantimes.com ವರದಿ ಮಾಡಿದೆ. ಅವರು ಈ ಕುರಿತ ವಿಡಿಯೊವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೊದ ನೈಜತೆಯನ್ನು ಸ್ವತಂತ್ರವಾಗಿ ದೃಢಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದೂ hindustantimes.com ವರದಿ ಮಾಡಿದೆ.

ನೂತನ ಸಂಸತ್ ಭವನಕ್ಕೆ ರಾಷ್ಟ್ರಪತಿಗಳು ಪ್ರವೇಶಿಸುವ ಪಥ ಸೇರಿದಂತೆ ಸಂಸತ್ತಿನ ಆವರಣದೊಳಗೆ ನೀರು ಸೋರಿಕೆಯಾಗುತ್ತಿರುವ ವಿಷಯವನ್ನು ತಾನು ಪ್ರಸ್ತಾಪಿಸಲು ಬಯಸಿರುವುದಾಗಿ ಠಾಗೋರ್ ತಮ್ಮ ನೋಟಿಸ್ ನಲ್ಲಿ ಹೇಳಿದ್ದಾರೆ.

ನೂತನ ಸಂಸತ್ ಭವನ ನಿರ್ಮಾಣವಾಗಿ ಕೇವಲ ಒಂದು ವರ್ಷ ಮುಕ್ತಾಯಗೊಳ್ಳುವುದರೊಳಗಾಗಿ ಸಂಸತ್ ಭವನದ ಕಟ್ಟಡದ ನಿರ್ಮಾಣದಲ್ಲಿ ಗಂಭೀರ ಸ್ವರೂಪದ ಸಮಸ್ಯೆಗಳಿರುವುದನ್ನು ಈ ಘಟನೆ ಎತ್ತಿ ತೋರಿಸುತ್ತಿದೆ ಎಂದು ಅವರು ಬೊಟ್ಟು ಮಾಡಿದ್ದಾರೆ.

“ಈ ಸಮಸ್ಯೆಯ ಕುರಿತು ಪರಿಶೀಲಿಸಲು ಕಟ್ಟಡದ ಆಳವಾದ ಪರೀಕ್ಷೆಗಾಗಿ ಎಲ್ಲ ಪಕ್ಷಗಳ ಸಂಸದರನ್ನೊಳಗೊಂಡ ವಿಶೇಷ ಸಮಿತಿಯನ್ನು ರಚಿಸಬೇಕು ಎಂದು ನಾನು ಪ್ರಸ್ತಾಪಿಸುತ್ತಿದ್ದೇನೆ. ಈ ಸಮಿತಿಯು ಸೋರಿಕೆಯ ಕಾರಣಗಳತ್ತ ಗಮನ ಹರಿಸಿ, ವಿನ್ಯಾಸ ಮತ್ತು ಬಳಕೆಯಾಗಿರುವ ಸಾಮಗ್ರಿಗಳ ಮೌಲ್ಯಮಾಪನ ಮಾಡಲಿದೆ ಹಾಗೂ ಅಗತ್ಯ ದುರಸ್ತಿ ಕ್ರಮಗಳನ್ನು ಶಿಫಾರಸು ಮಾಡಲಿದೆ. ಇದರೊಂದಿಗೆ, ಈ ಸಮಿತಿಯು ತಾನು ಪತ್ತೆ ಹಚ್ಚಿದ ಸಂಗತಿಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಮೂಲಕ ನಿರ್ವಹಣಾ ಶಿಷ್ಟಾಚಾರವನ್ನು ಸ್ಥಾಪಿಸಿ, ಪಾರದರ್ಶಕತೆಯನ್ನು ಖಾತರಿ ಪಡಿಸಲಿದೆ” ಎಂದು ವಿರುಧನಗರ್ ಸಂಸದರಾದ ಮಾಣಿಕಮ್ ಠಾಗೋರ್ ಅವರು ಲೋಕಸಭೆಯಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News