“ಫ್ಯಾಸಿಸ್ಟ್ ಬಿಜೆಪಿ ಡೌನ್” ಘೋಷಣೆ ಕೂಗುವುದು ಅಪರಾಧವಲ್ಲ ಎಂದ ಮದ್ರಾಸ್ ಹೈಕೋರ್ಟ್
ಹೊಸದಿಲ್ಲಿ: ವಿಮಾನ ನಿಲ್ದಾಣವೊಂದರಲ್ಲಿ ಹಾಗೂ ಆಗಿನ ತಮಿಳುನಾಡು ಬಿಜೆಪಿ ಅಧ್ಯಕ್ಷೆ ತಮಿಳಿಸೈ ಸೌಂದರರಾಜನ್ ಅವರು ಪ್ರಯಾಣಿಸುತ್ತಿದ್ದ ವಿಮಾನವೊಂದರಲ್ಲಿ 2018ರಲ್ಲಿ ಬಿಜೆಪಿ ವಿರುದ್ಧ ಘೋಷಣೆ ಕೂಗಿದ್ದ ಸಂಶೋಧನಾ ವಿದ್ವಾಂಸೆಯ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದೆ.
“ಫ್ಯಾಸಿಸ್ಟ್ ಬಿಜೆಪಿ ಡೌನ್” ಎಂಬ ಘೋಷಣೆ ಕೂಗುವುದು ಅಪರಾಧವಲ್ಲ ಹಾಗೂ ಇದು ಕ್ಷುಲ್ಲಕ ವಿಚಾರ ಎಂದು ನ್ಯಾಯಾಲಯ ಹೇಳಿದೆ.
ಆರೋಪಿ ಲೂಯಿಸ್ ಸೋಫಿಯಾ ಓರ್ವ ಸಂಶೋಧನಾ ವಿದ್ವಾಂಸೆಯಾಗಿದ್ದು ತೂತುಕುಡಿ ವಿಮಾನ ನಿಲ್ದಾಣದಲ್ಲಿ ಹಾಗೂ ನಂತರ ಈಗಿನ ಪುದುಚ್ಚೇರಿ ಲೆಫ್ಟಿನೆಂಟ್ ಗವರ್ನರ್ ಆಗಿರುವ ತಮಿಳಿಸೈ ಅವರಿದ್ದ ವಿಮಾನದಲ್ಲಿ ಘೋಷಣೆ ಕೂಗಿದ್ದರು. ಸೋಫಿಯಾರನ್ನು ನಂತರ ಬಂಧಿಸಲಾಯಿತಾದರೂ ಮರುದಿನ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು.
2019ರಲ್ಲಿ ಸೋಫಿಯಾ ಅವರು ನ್ಯಾಯಾಲಯದ ಕದ ತಟ್ಟಿ ತಮ್ಮ ವಿರುದ್ಧ ತೂತುಕುಡಿ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ರದ್ದುಗೊಳಿಸಬೇಕೆಂದು ಕೋರಿದ್ದರು.
ಸೆಕ್ಷನ್ 290 ಅಡಿ ಸಾರ್ವಜನಿಕ ಶಾಂತಿಗೆ ಭಂಗ ತರುವಂತಹ ಕೃತ್ಯವನ್ನೇನೂ ಸೋಫಿಯಾ ನಡೆಸಿಲ್ಲ ಎಂದು ಜಸ್ಟಿಸ್ ಪಿ ಧನಬಲ್ ಅವರಿರುವ ಮದ್ರಾಸ್ ಹೈಕೋರ್ಟಿನ ಮಧುರೈ ಪೀಠ ಹೇಳಿದೆ.