ರಾಜಸ್ಥಾನ: ಯೂಟ್ಯೂಬ್ ನೋಡಿಕೊಂಡು ರೋಗಿಯ ECG ಮಾಡಿದ ಸಿಬ್ಬಂದಿ; ವಿಡಿಯೋ ವೈರಲ್

Update: 2024-11-04 12:06 GMT

ರಾಜಸ್ಥಾನ: ಜೋಧ್ಪುರದ ಆಸ್ಪತ್ರೆಯಲ್ಲಿ ಸಿಬ್ಬಂದಿಯೋರ್ವ ಯೂಟ್ಯೂಬ್ ನೋಡಿಕೊಂಡು ರೋಗಿಯ ಇಸಿಜಿ(ECG) ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜೋಧ್ಪುರದ ಪಾವೋಟಾದಲ್ಲಿನ ಸ್ಯಾಟ್ ಲೈಟ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಫೋನ್ ನಲ್ಲಿ ಯೂಟ್ಯೂಬ್ ತರಬೇತಿ ವೀಕ್ಷಿಸಿ ಸಿಬ್ಬಂದಿ ರೋಗಿಯ ಇಸಿಜಿ ಮಾಡುವುದು ವೀಡಿಯೊದಲ್ಲಿ ಸೆರೆಯಾಗಿದೆ.

ರೋಗಿ ಮತ್ತು ಆತನ ಕುಟುಂಬವು ವೈದ್ಯರು ಅಥವಾ ಅರ್ಹ ಸಿಬ್ಬಂದಿಯಿಂದ ಇಸಿಜಿ ಮಾಡಿಸುವಂತೆ ಕೇಳಿಕೊಂಡಿದೆ. ಆದರೆ ಆ ಸಿಬ್ಬಂದಿ ಯೂಟ್ಯೂಬ್ ನೋಡಿಕೊಂಡು ಇಸಿಜಿ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ವಿಡಿಯೋದಲ್ಲಿ ಅಟೆಂಡರ್ ಇಸಿಜಿಯನ್ನು ಹೇಗೆ ನಿರ್ವಹಿಸಬೇಕು ಎಂದು ನನಗೆ ತಿಳಿದಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ದೀಪಾವಳಿ ಕಾರಣ ಯಾವುದೇ ನೌಕರರು ಕರ್ತವ್ಯದಲ್ಲಿಲ್ಲದ ಕಾರಣ ಇಸಿಜಿ ಮಾಡುವಂತೆ ಹೇಳಲಾಗಿದೆ ಎಂದು ಹೇಳಿದ್ದಾರೆ.

ಈ ಕುರಿತ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಘಟನೆಯ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆಸ್ಪತ್ರೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲೆ ಬಿಎಸ್ ಜೋಧಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News