ರಾಜಸ್ಥಾನ: ರೈತ ಪ್ರತಿಭಟನಕಾರರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್
ಜೈಪುರ: ದಿಲ್ಲಿ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಾಗೂ ಶುಕ್ರವಾರ ಕರೆ ನೀಡಲಾಗಿದ್ದ ‘ಗ್ರಾಮೀಣ ಭಾರತ್ ಬಂದ್’ ನಡುವೆ ಇಲ್ಲಿನ ಹನುಮಾನ್ಗಢ ಜಿಲ್ಲೆಯಲ್ಲಿ ಶುಕ್ರವಾರ ರೈತ ಪ್ರತಿಭಟನಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ (ವೀಡಿಯೊ ಕಾನ್ಫರೆನ್ಸ್) ಮೂಲಕ ಮಾತನಾಡಿದ ಕಾರ್ಯಕ್ರಮದಲ್ಲಿ ರೈತರು ಪ್ರತಿಭಟನೆ ನಡೆಸಿದರು, ಬ್ಯಾರಿಕೇಡ್ ಗಳನ್ನು ಮುರಿದರು. ಕೂಡಲೇ ಕಾರ್ಯಾಚರಣೆಗೆ ಇಳಿದ ಪೊಲೀಸರು ರೈತ ಪ್ರತಿಭಟನಕಾರರ ಮೇಲೆ ಲಾಠಿ ಚಾರ್ಜ್ ನಡೆಸಿದರು.
ಈ ಘಟನೆಯಲ್ಲಿ ಓರ್ವ ರೈತನಿಗೆ ಗಾಯವಾಗಿದೆ ಎಂದು ಕಿಶಾನ್ ಪಂಚಾಯತ್ ಅಧ್ಯಕ್ಷ ರಾಮ್ಪಾಲ್ ಜಾಟ್ ತಿಳಿಸಿದ್ದಾರೆ.
ಪಂಜಾಬ್ ಹಾಗೂ ಹರ್ಯಾಣಗಳೊಂದಿಗೆ ತಮ್ಮ ಗಡಿಗಳನ್ನು ಹಂಚಿಕೊಂಡಿರುವ ಹನುಮಾನ್ ಗಢ ಹಾಗೂ ಶೃಂಗಾರ್ನಗರ್ ಜಿಲ್ಲೆಗಳಲ್ಲಿ ಶುಕ್ರವಾರ ‘ಗ್ರಾಮೀಣ ಭಾರತ್ ಬಂದ್’ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ಭಾರೀ ಪೊಲೀಸ್ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿತ್ತು.
ಈ ನಡುವೆ ಪ್ರತ್ಯೇಕ ಬೆಳವಣಿಗೆಯೊಂದರಲ್ಲಿ ರಾಜ್ಯಾದ್ಯಂತದ 39 ರೈತ ಸಂಘಟನೆಗಳು ಬೂಂದಿ ಜಿಲ್ಲೆಯ ಕರ್ವಾರ್ನಲ್ಲಿ ಗುರುವಾರ ಸಭೆ ನಡೆಸಿವೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾಯ್ದೆ ತರುವ ಕುರಿತು ಹಾಗೂ ಫೆಬ್ರವರಿ 21ರಂದು ನಡೆಯುವ ಟ್ರ್ಯಾಕ್ಟರ್ ರ್ಯಾಲಿಯ ಕುರಿತು ಚರ್ಚೆ ನಡೆಸುವ ಉದ್ದೇಶದಿಂದ ಈ ಸಭೆ ಆಯೋಜಿಸಲಾಗಿದೆ.
ನಮ್ಮ ಕನಿಷ್ಠ 650 ಟ್ರ್ಯಾಕ್ಟರ್ಗಳು ಮೊದಲು ಜೈಪುರದಲ್ಲಿ ಸೇರಲಿವೆ ಹಾಗೂ ಅಲ್ಲಿಂದ ದಿಲ್ಲಿಯತ್ತ ಸಂಚರಿಸಲಿವೆ. ನಾವು 500 ಟ್ರ್ಯಾಕ್ಟರ್ಗಳ ಗುರಿ ಹೊಂದಿದ್ದೆವು. ಆದರೆ, ಇನ್ನಷ್ಟು ಬೆಂಬಲ ವ್ಯಕ್ತವಾಗುವ ಸಾಧ್ಯತೆ ಇದೆ ಎಂದು ರಾಮ್ಪಾಲ್ ಜಾಟ್ ಹೇಳಿದ್ದಾರೆ.
ಕನಿಷ್ಠ ಬೆಂಬಲ ಬೆಲೆ ಕುರಿತು ಕಾನೂನು ರೂಪಿಸಲು ರಾಜ್ಯ ಸರಕಾರಕ್ಕೆ ಕೂಡ ಅಧಿಕಾರ ಇರುವುದರಿಂದ ತಮ್ಮೊಂದಿಗೆ ದಿಲ್ಲಿಗೆ ಬರುವಂತೆ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಅವರನ್ನು ಆಗ್ರಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.