ರಾಜ್ ಕೋಟ್ ಅಗ್ನಿ ದುರಂತ: ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಗುಜರಾತ್ ಹೈಕೋರ್ಟ್
ಅಹಮದಾಬಾದ್: ರಾಜ್ ಕೋಟ್ ಗೇಮ್ ಝೋನ್ ಒಂದರಲ್ಲಿ ಸಂಭವಿಸಿದ ಅಗ್ನಿ ದುರಂತದ ಕುರಿತು ಗುಜರಾತ್ ಹೈಕೋರ್ಟ್ ನ ವಿಶೇಷ ನ್ಯಾಯಪೀಠವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಈ ದುರಂತದಲ್ಲಿ 27 ಮಂದಿ ಮೃತಪಟ್ಟಿದ್ದರು.
ಈ ದುರಂತವನ್ನು ಮಾನವ ನಿರ್ಮಿತ ದುರಂತ ಎಂದು ಬಣ್ಣಿಸಿದ ನ್ಯಾ. ಬೀರೇನ್ ವೈಷ್ಣವ್ ಹಾಗೂ ದೇವನ್ ದೇಸಾಯಿ ಅವನ್ನೊಳಗೊಂಡಿದ್ದ ನ್ಯಾಯಪೀಠ, ಇಂತಹ ಗೇಮ್ ಝೋನ್ ಗಳು ಹಾಗೂ ಮನರಂಜನಾ ತಾಣಗಳು ಸಂಬಂಧಿಸಿದ ಪ್ರಾಧಿಕಾರಗಳಿಂದ ಅಗತ್ಯ ಪರವಾನಗಿ ಪಡೆದಿಲ್ಲ ಎಂಬ ಸಂಗತಿಯನ್ನು ಗಮನಕ್ಕೆ ತೆಗೆದುಕೊಂಡಿತು.
ಅಹಮದಾಬಾದ್, ವಡೋದರ, ಸೂರತ್ ಹಾಗೂ ರಾಜ್ ಕೋಟ್ ಮಹಾನಗರ ಪಾಲಿಕೆಗಳ ವಕೀಲರಿಗೆ ಸೋಮವಾರ ನ್ಯಾಯಾಲಯದೆದುರು ಹಾಜರಾಗುವಂತೆ ಸೂಚಿಸಿದ ನ್ಯಾಯಪೀಠವು, ತಮ್ಮ ವ್ಯಾಪ್ತಿಯಲ್ಲಿ ತಮ್ಮ ಪ್ರಾಧಿಕಾರಗಳ ಯಾವ ಕಾನೂನಿನ ನಿಯಮಗಳಡಿ ಈ ಘಟಕಗಳು ಸ್ಥಾಪನೆಯಾಗಲು ಅಥವಾ ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಲು ಅವಕಾಶ ನೀಡಲಾಗಿತ್ತು ಎಂಬ ಕುರಿತು ಮಾಹಿತಿ ನೀಡುವಂತೆ ಸೂಚಿಸಿತು.
“ಗುಜರಾತ್ ಸಮಗ್ರ ಸಾಮಾನ್ಯ ಅಭಿವೃದ್ಧಿ ನಿಯಂತ್ರಣ ನಿಯಮಗಳಲ್ಲಿನ ನ್ಯೂನತೆಯ ಲಾಭವನ್ನು ರಾಜ್ ಕೋಟ್ ನ ಗೇಮ್ ಝೋನ್ ಪಡೆದುಕೊಂಡಿತ್ತು ಎಂಬ ಸಂಗತಿಯನ್ನು ದಿನಪತ್ರಿಕೆಗಳಲ್ಲಿ ಓದಿ ನಮಗೆ ಆಘಾತವಾಗಿದೆ. ಈ ಮನರಂಜನಾ ವಲಯಗಳು ಸಂಬಂಧಿಸಿದ ಪ್ರಾಧಿಕಾರಗಳಿಂದ ಪರವಾನಗಿ ಪಡೆದಿಲ್ಲ ಎಂದು ಪತ್ರಿಕಾ ವರದಿಗಳು ಸೂಚಿಸುತ್ತಿವೆ” ಎಂದು ನ್ಯಾಯಪೀಠ ಹೇಳಿತು.
ಈ ಅಗ್ನಿ ದುರಂತದಲ್ಲಿ ಈವರೆಗೆ 12 ಮಕ್ಕಳು ಸೇರಿದಂತೆ 27 ಮಂದಿ ಮೃತಪಟ್ಟಿದ್ದು, ಉಳಿದ ಮೂವರು ಗಾಯಗೊಂಡಿದ್ದಾರೆ. ಜನರು ಬೇಸಿಗೆ ರಜಾದಿನ ಕಳೆಯಲೆಂದು ಶನಿವಾರ ಇಲ್ಲಿಗೆ ಬಂದಿದ್ದಾಗ ಈ ಅಗ್ನಿ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ನಡುವೆ, ರವಿವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ನಂತರ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಯೋಗಕ್ಷೇಮವನ್ನು ವಿಚಾರಿಸಿದರು.