ರಾಂಚಿ: ಕೇಜ್ರಿವಾಲ್, ಹೇಮಂತ್ ಗಾಗಿ ‘ಇಂಡಿಯಾ’ ರ‍್ಯಾಲಿಯ ವೇದಿಕೆಯಲ್ಲಿ ಖಾಲಿ ಆಸನಗಳು
ರಾಂಚಿ: ಇಂಡಿಯಾ ಪ್ರತಿಪಕ್ಷ ಮೈತ್ರಿಕೂಟವು ರಾಂಚಿಯಲ್ಲಿ ರವಿವಾರ ಆಯೋಜಿಸಿದ ಬೃಹತ್ ರ‍್ಯಾಲಿಯಲ್ಲಿ ಬಂಧನದಲ್ಲಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗಾಗಿ ಎರಡು ಆಸನಗಳನ್ನು ಖಾಲಿ ಇರಿಸಲಾಗಿತ್ತು.
ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದಲ್ಲಿ ಆಯೋಜಿಸಲಾದ ಉಲ್ಗುಲನ್ (ಕ್ರಾಂತಿ) ನ್ಯಾಯ ಮಹಾರ‍್ಯಾಲಿಯಲ್ಲಿ , ಆ ಪಕ್ಷದ ಕಾರ್ಯಕರ್ತರು ಹೇಮಂತ್ ಸೊರೇನ್ ಅವರ ಮಾಸ್ಕ್ಗಳನ್ನು ಧರಿಸಿ ಪಾಲ್ಗೊಂಡಿದ್ದರು.
ಭೂವಂಚನೆ ಆರೋಪಕ್ಕೆ ಸಂಬಂಧಿಸಿದ ಕಪ್ಪುಹಣ ಬಿಳುಪು ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಈಡಿ)ವು ಸೊರೇನ್ ಅವರನ್ನು ಜನವರಿ 31ರಂದು ಬಂಧಿಸಿತ್ತು. ದಿಲ್ಲಿ ಮದ್ಯ ನೀತಿ ಪರಿಷ್ಕರಣೆ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ಮಾರ್ಚ್ 21ರಂದು ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ಬಂಧಿಸಿತ್ತು.
ಹೇಮಂತ್ ಸೊರೇನ್ ಹಾಗೂ ಕೇಜ್ರಿವಾಲ್ ಅವರಿಗಾಗಿ ರ‍್ಯಾಲಿಯ ಖಾಲಿ ಆಸನಗಳನ್ನು ಇರಿಸಲಾಗಿತ್ತಾದರೂ, ಅವರ ಪತ್ನಿಯರಾದ ಕಲ್ಪನಾ ಸೊರೇನ್ ಹಾಗೂ ಸುನೀತಾ ಕೇಜ್ರಿವಾಲ್ ವೇದಿಕೆಯಲ್ಲಿ ಆಸೀನರಾಗಿದ್ದರು.
ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಸೊರೇನ್ ಬೆಂಬಲಿಗರು ‘ ಜೈಲ್ ಕಾ ತಾಲಾ ಟುಟೇಗಾ, ಹೇಮಂತ್ ಸೊರೇನ್ ಚುಟೇಗಾ (ಜೈಲಿನ ಬೀಗವನ್ನು ಮುರಿಯಲಾಗುವುದು, ಹೇಮಂತ್ ಸೊರೇನ್ ಬಿಡುಗಡೆಗೊಳ್ಳುವರು) ಹಾಗೂ ಜಾರ್ಖಂಡ್ ಜುಕೇಗಾ ನಹೀ (ಜಾರ್ಖಂಡ್ ತಲೆಬಾಗಲಾರದು) ಎಂಬ ಘೋಷಣೆಗಳನ್ನು ಕೂಗಿದರು.
ಜಾರ್ಖಂಡ್ ರಾಂಚಿಯಲ್ಲಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದರೂ, ಸುಡುಬಿಸಿಲನ್ನು ಲೆಕ್ಕಿಸದೆ ಸಹಸ್ರಾರು ಸಂಖ್ಯೆಯಲ್ಲಿ ಜನರು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ಜೆಎಂಎಂ ವರಿಷ್ಠ ಶಿಬು ಸೊರೇನ್ ನ್ಯಾಶನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಆರ್ಜೆಡಿ ನಾಯಕ ಹಾಗೂ ಮಾಜಿ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್, ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಮತ್ತಿತರರು ರ‍್ಯಾಲಿಯಲ್ಲಿ ಭಾಗವಹಿಸಿದ್ದರು.ಪ್ರಭಾತ್ ತಾರಾ ಮೈದಾನದಲ್ಲಿ ನಡೆದ ರ‍್ಯಾಲಿಯಲ್ಲಿ 28 ರಾಜಕೀಯ ಪಕ್ಷಗಳು ಪಾಲ್ಗೊಂಡಿದ್ದವು.