ಮಧ್ಯಪ್ರದೇಶ | ಆಸ್ಪತ್ರೆಯ ಮಕ್ಕಳ ವಾರ್ಡ್ ನಲ್ಲಿ ಇಲಿಗಳ ಹಾವಳಿ: ವಿಡಿಯೊ ವೈರಲ್

Update: 2025-03-08 13:51 IST
ಮಧ್ಯಪ್ರದೇಶ | ಆಸ್ಪತ್ರೆಯ ಮಕ್ಕಳ ವಾರ್ಡ್ ನಲ್ಲಿ ಇಲಿಗಳ ಹಾವಳಿ: ವಿಡಿಯೊ ವೈರಲ್

Photo credit: deccanchronicle.com

  • whatsapp icon

ಭೋಪಾಲ್:ಮಧ್ಯಪ್ರದೇಶದ ಆಸ್ಪತ್ರೆಯೊಂದರಲ್ಲಿನ ಮಕ್ಕಳ ವಾರ್ಡ್ ನಲ್ಲಿ ರೋಗಿಗಳ ಹಾಸಿಗೆಗಳ ಬಳಿ ಅಸಂಖ್ಯಾತ ಇಲಿಗಳು ಇರುವ ವಿಡಿಯೊ ವೈರಲ್ ಆಗಿದ್ದು, ಇದರಿಂದಾಗಿ ಆಸ್ಪತ್ರೆಯ ಶುಚಿತ್ವ ನಿರ್ವಹಣೆಯ ಕುರಿತು ವ್ಯಾಪಕ ಆಕ್ರೋಶ ಹಾಗೂ ಕಳವಳ ವ್ಯಕ್ತವಾಗಿದೆ.

ಈ ವಿಡಿಯೊ ವೈರಲ್ ಆದ ನಂತರ, ಶುಚಿತ್ವ ನಿರ್ವಹಣೆಯಲ್ಲಿನ ತಮ್ಮ ವೈಫಲ್ಯವನ್ನು ಒಪ್ಪಿಕೊಂಡಿರುವ ಆಸ್ಪತ್ರೆಯ ಅಧಿಕಾರಿಗಳು, ಈ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪ್ರವೀಣ್ ಉಯ್ಕೆ, “ಇನ್ನು ಮುಂದೆ ನಾವು ನಿಯಮಿತವಾಗಿ ಕೀಟ ನಿಯಂತ್ರಣ ಕಾರ್ಯಾಚರಣೆ ನಡೆಸುತ್ತೇವೆ ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತೇವೆ” ಎಂದು ಭರವಸೆ ನೀಡಿದ್ದಾರೆ.

ಈ ಘಟನೆಯಿಂದಾಗಿ ಖುದ್ದಾಗಿ ಮಕ್ಕಳ ವಾರ್ಡ್ ಗೆ ಭೇಟಿ ನೀಡಿದ ಹಿರಿಯ ಜಿಲ್ಲಾ ಆರೋಗ್ಯಾಧಿಕಾರಿಗಳು, ವಾರ್ಡ್ ನ ತಪಾಸಣೆ ನಡೆಸಿದ್ದಾರೆ. ನಂತರ ಆಸ್ಪತ್ರೆಯ ಆಡಳಿತವನ್ನು ತರಾಟೆಗೆ ತೆಗೆದುಕೊಂಡ ಅವರು, ತಕ್ಷಣವೇ ಸೌಲಭ್ಯಗಳನ್ನು ಸುಧಾರಿಸುವಂತೆ ಸೂಚಿಸಿದ್ದಾರೆ.

ಇದರೊಂದಿಗೆ, ಸ್ಥಳೀಯ ಶಾಸಕಿ ಹಾಗೂ ಮಧ್ಯಪ್ರದೇಶ ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್ ಸಚಿವೆ ಸಂಪತೀಯ ಉಯ್ಕೆ ಕೂಡಾ ಆಸ್ಪತ್ರೆಗೆ ಭೇಟಿ ನೀಡಿ, ಈ ಘಟನೆಗೆ ನಿರ್ಲಕ್ಷ್ಯವೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸೂಕ್ತ ತನಿಖೆ ನಡೆಸಿ, ಘಟನೆಗೆ ಕಾರಣರಾಗಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆಯೂ ಅವರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News