ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿ ರಾಮಾಯಣ ಸೇರ್ಪಡೆಗೆ ಶಿಫಾರಸು
ಹೊಸದಿಲ್ಲಿ : ಭಾರತದ ‘ಶಾಸ್ತ್ರೀಯ ಅವಧಿ ’ಯಡಿ ಇತಿಹಾಸ ಪಠ್ಯಕ್ರಮದ ಭಾಗವಾಗಿ ಶಾಲೆಗಳಲ್ಲಿ ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳನ್ನು ಬೋಧಿಸಬೇಕು ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ)ಯ ಉನ್ನತ ಮಟ್ಟದ ಸಮಿತಿಯು ಶಿಫಾರಸು ಮಾಡಿದೆ.
ಎಲ್ಲ ತರಗತಿ ಕೋಣೆಗಳ ಗೋಡೆಗಳ ಮೇಲೆ ಸಂವಿಧಾನದ ಪೀಠಿಕೆಯನ್ನು ಸ್ಥಳೀಯ ಭಾಷೆಗಳಲ್ಲಿ ಬರೆಯಬೇಕು ಎಂದೂ ಸಮಿತಿಯು ಶಿಫಾರಸು ಮಾಡಿದೆ ಎಂದು ಸಮಿತಿಯ ಅಧ್ಯಕ್ಷ ಪ್ರೊ.ಸಿ.ಐ.ಇಸಾಕ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಶಾಲೆಗಳಿಗೆ ಸಮಾಜ ವಿಜ್ಞಾನ ಪಠ್ಯಕ್ರಮವನ್ನು ಪರಿಷ್ಕರಿಸಲು ರಚಿಸಲಾದ ಎನ್‌ಸಿಇಆರ್‌ಟಿ ಯ ಸಮಾಜ ವಿಜ್ಞಾನ ಸಮಿತಿಯು ಭಾರತೀಯ ಜ್ಞಾನ ವ್ಯವಸ್ಥೆ, ವೇದಗಳು ಮತ್ತು ಆಯುರ್ವೇದವನ್ನು ಪಠ್ಯಪುಸ್ತಕಗಳಲ್ಲಿ ಪರಿಚಯಿಸುವುದು ಸೇರಿದಂತೆ ಹಲವಾರು ಪ್ರಸ್ತಾವಗಳನ್ನು ಮಾಡಿದ್ದು, ಇವುಗಳಿಗೆ ಎನ್ಸಿಇಆರ್ಟಿಯ ಅಂತಿಮ ಒಪ್ಪಿಗೆ ಇನ್ನಷ್ಟೇ ದೊರೆಯಬೇಕಿದೆ.
ಇತಿಹಾಸವನ್ನು ಶಾಸ್ತ್ರೀಯ, ಮಧ್ಯಕಾಲೀನ, ಬ್ರಿಟಿಷ್ ಮತ್ತು ಆಧುನಿಕ ಭಾರತ ; ಹೀಗೆ ನಾಲ್ಕು ಅವಧಿಗಳಲ್ಲಿ ವರ್ಗೀಕರಿಸಲು ಸಮಿತಿಯು ಶಿಫಾರಸು ಮಾಡಿದೆ. ಈವರೆಗೆ ಭಾರತೀಯ ಇತಿಹಾಸದಲ್ಲಿ ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಭಾರತ ಹೀಗೆ ಕೇವಲ ಮೂರು ವರ್ಗೀಕರಣಗಳಿವೆ ಎಂದು ಹೇಳಿದ ನಿವೃತ್ತ ಇತಿಹಾಸ ಪ್ರೊಫೆಸರ್ ಇಸಾಕ್, ‘ಶಾಸ್ತ್ರೀಯ ಅವಧಿಯಡಿ ಭಾರತೀಯ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ಬೋಧನೆಗೆ ನಾವು ಶಿಫಾರಸು ಮಾಡಿದ್ದೇವೆ’ ಎಂದು ತಿಳಿಸಿದರು.