11 ಗೂರ್ಖಾ ಉಪ ಗುಂಪುಗಳನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಪರಿಶೀಲನೆ : ಅಮಿತ್ ಶಾ
ಹೊಸದಿಲ್ಲಿ: ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ 11 ಗೂರ್ಖ ಉಪ ಗುಂಪುಗಳನ್ನು ಸೇರಿಸುವ ಬಗ್ಗೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರವಿವಾರ ಹೇಳಿದ್ದಾರೆ.
ಭಾರತದಲ್ಲಿ ಗೂರ್ಖ ಜನಾಂಗೀಯರು ಮುಖ್ಯವಾಗಿ ಪಶ್ಚಿಮ ಬಂಗಾಳ, ಸಿಕ್ಕಿಮ್, ಉತ್ತರಾಖಂಡ ಮತ್ತು ಈಶಾನ್ಯ ಭಾರತದಲ್ಲಿ ವಾಸಿಸುತ್ತಿದ್ದಾರೆ.
ತಮಗೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸುತ್ತಿರುವ 11 ಗೂರ್ಖ ಉಪ ಗುಂಪುಗಳೆಂದರೆ - ಗುರುಂಗರು, ಭುಜೇಲರು, ಮಂಗರರು, ನೇವಾರರು, ಜೋಗಿ, ಖಾ, ರೈ, ಸುನ್ವಾರರು, ತಾಮಿಗಳು, ಯಖ್ಖಾ ಮತ್ತು ದಿಮಾಲರು.
‘‘ಈ ವಲಯಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ನಾವು ಬದ್ಧರಾಗಿದ್ದೇವೆ’’ ಎಂದು ರವಿವಾರ ಬಿಜೆಪಿ ಅಭ್ಯರ್ಥಿ ಹಾಗೂ ದಾರ್ಜಿಲಿಂಗ್ ಸಂಸದ ರಾಜು ಬಿಸ್ತ ಪರವಾಗಿ ಪ್ರಚಾರ ನಡೆಸಿದ ಶಾ ಹೇಳಿದರು. ‘‘11 ಗೂರ್ಖಾ ಉಪ ಗುಂಪುಗಳನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವ ಬಗ್ಗೆಯೂ ನಾವು ಪರಿಶೀಲನೆ ನಡೆಸುತ್ತಿದ್ದೇವೆ’’ ಎಂದು ಅವರು ನುಡಿದರು.
ಕೆಟ್ಟ ಹವಾಮಾನದಿಂದಾಗಿ ದಾರ್ಜಿಲಿಂಗ್ ಗೆ ಪ್ರಯಾಣಿಸಲು ಅಸಾಧ್ಯವಾದ ಹಿನ್ನೆಲೆಯಲ್ಲಿ, ಅವರು ಹೊಸದಿಲ್ಲಿಯಿಂದಲೇ ಫೋನ್ ಮೂಲಕ ಉದ್ದೇಶಿಸಿ ಮಾತನಾಡಿದರು.