ಆದಾಯ ತೆರಿಗೆ ಹಂತಗಳ ಪರಿಷ್ಕರಣೆ; ತೆರಿಗೆ ವಿನಾಯಿತಿ ಮಿತಿ ವಿಸ್ತರಣೆಯಿಲ್ಲ

Update: 2024-07-23 13:50 GMT

ಸಾಂದರ್ಭಿಕ ಚಿತ್ರ 

ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿರುವ ಬಜೆಟ್ನಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿಯಲ್ಲಿ ಯವುದೇ ಬದಲಾವಣೆಯನ್ನು ಘೋಷಿಸಿಲ್ಲ. ಆದರೆ, ನೂತನ ಆದಾಯ ತೆರಿಗೆ ವ್ಯವಸ್ಥೆಯಡಿಯಲ್ಲಿ ಪರಿಷ್ಕೃತ ಹಂತಗಳನ್ನು ಘೋಷಿಸಿದ್ದಾರೆ.

ಈ ಬದಲಾವಣೆಗಳಿಂದಾಗಿ ವೇತನ ಪಡೆಯುವ ಉದ್ಯೋಗಿಯೊಬ್ಬರಿಗೆ ವರ್ಷಕ್ಕೆ 17,500 ರೂಪಾಯಿವರೆಗೆ ಆದಾಯ ತೆರಿಗೆಯನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ಸಂಸತ್ ನಲ್ಲಿ ತನ್ನ ಏಳನೇ ಬಜೆಟ್ ಮಂಡಿಸಿದ ಅವರು ಹೇಳಿದ್ದಾರೆ.

ಆದಾಯ ತೆರಿಗೆ ದರದಲ್ಲಿ ಯಾವುದೇ ಬದಲಾವಣೆಯಿಲ್ಲವಾದರೂ, ಆರಂಭಿಕ 3 ಲಕ್ಷ ರೂ.ವರೆಗಿನ ಹಂತವನ್ನು ಹೊರತುಪಡಿಸಿ ಇತರ ಹಂತಗಳ ಆದಾಯ ವ್ಯಾಪ್ತಿಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಹಿಂದಿನ ರೂ. 3 ಲಕ್ಷದಿಂದ ರೂ. 6 ಲಕ್ಷವರೆಗಿನ ಹಂತವನ್ನು ಈಗ ರೂ. 3 ಲಕ್ಷದಿಂದ ರೂ. 7 ಲಕ್ಷಕ್ಕೆ ವಿಸ್ತರಿಸಲಾಗಿದೆ. ಆದರೆ ಹಿಂದಿನ ಆದಾಯ ತೆರಿಗೆ ದರವಾದ 5 ಶೇಕಡವೇ ಇದಕ್ಕೂ ಅನ್ವಯಿಸುತ್ತದೆ.

ಅದೇ ರೀತಿ, ರೂ. 6 ಲಕ್ಷದಿಂದ ರೂ. 9 ಲಕ್ಷವರೆಗಿನ ಹಂತವನ್ನು ರೂ. 7 ಲಕ್ಷದಿಂದ ರೂ. 10 ಲಕ್ಷಕ್ಕೆ ಮತ್ತು ರೂ. 9 ಲಕ್ಷದಿಂದ ರೂ. 12 ಲಕ್ಷದವರೆಗಿನ ಹಂತವನ್ನು ರೂ. 10 ಲಕ್ಷದಿಂದ ರೂ. 12 ಲಕ್ಷಕ್ಕೆ ವಿಸ್ತರಿಸಲಾಗಿದೆ. ಆದರೆ, ರೂ. 12 ಲಕ್ಷದಿಂದ ರೂ. 15 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಆದಾಯದವರೆಗಿನ ಹಂತದಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ.

ಅದೂ ಅಲ್ಲದೆ, ನೂತನ ಆದಾಯ ತೆರಿಗೆ ವ್ಯವಸ್ಥೆಯಲ್ಲಿ, ವೇತನ ಪಡೆಯುವ ಉದ್ಯೋಗಿಗಳ ‘ಸ್ಟ್ಯಾಂಡರ್ಡ್ ಡಿಡಕ್ಷನ್’ (ಒಟ್ಟು ಆದಾಯದಲ್ಲಿ ತೆರಿಗೆ ಅನ್ವಯವಾಗದ ಮೊತ್ತ. ಈ ಮೊತ್ತಕ್ಕೆ ಸಲ್ಲಿಸಲಾದ ತೆರಿಗೆಯನ್ನು ಬಳಿಕ ಹಿಂದಕ್ಕೆ ಪಡೆಯಬಹುದಾಗಿದೆ) ಮೊತ್ತವನ್ನು ಈಗಿನ ರೂ. 50,000 ದಿಂದ ರೂ. 75,000ಕ್ಕೆ ಹೆಚ್ಚಿಸಲಾಗಿದೆ.

ಆದರೆ, ಹಳೆಯ ಆದಾಯ ತೆರಿಗೆ ವ್ಯವಸ್ಥೆಯಡಿಯಲ್ಲಿ, ಸ್ಟ್ಯಾಂಡರ್ಡ್ ಡಿಡಕ್ಷನ್ ಮೊತ್ತದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಅದು ರೂ. 50,000ದಲ್ಲೇ ಮುಂದುವರಿಯುತ್ತದೆ.

ಅದೂ ಅಲ್ಲದೆ, ಕುಟುಂಬ ಪಿಂಚಣಿಯ ಸ್ಟ್ಯಾಂಡರ್ಡ್ ಡಿಡಕ್ಷನ್ ಮೊತ್ತವನ್ನು ರೂ. 15,000ದಿಂದ ರೂ. 25,000ಕ್ಕೆ ಹೆಚ್ಚಿಸಲಾಗಿದೆ.

ಇದರಿಂದ ಸುಮಾರು ನಾಲ್ಕು ಕೋಟಿ ವೇತನದಾರರು ಮತ್ತು ಪಿಂಚಣಿದಾರರಿಗೆ ಲಾಭವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಸರಕಾರದ ಈ ಕ್ರಮಗಳಿಂದಾಗಿ ಬೊಕ್ಕಸಕ್ಕೆ ಬರುವ 37,000 ಕೋಟಿ ರೂಪಾಯಿ ಆದಾಯ ಖೋತಾವಾಗುತ್ತದೆ ಎಂದು ಹಣಕಾಸು ಸಚಿವೆ ತಿಳಿಸಿದರು. ಇದರಲ್ಲಿ 29,000 ಕೋಟಿ ರೂಪಾಯಿ ಪ್ರತ್ಯಕ್ಷ ತೆರಿಗೆ ಮತ್ತು 8,000 ಕೋಟಿ ರೂಪಾಯಿ ಪರೋಕ್ಷ ತೆರಿಗೆಯಾಗಿದೆ. ಆದರೆ, 30,000 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ತೆರಿಗೆಯನ್ನು ನಿರೀಕ್ಷಿಸಲಾಗಿದ್ದು, ಖೊತಾ ಆಗುವ ಮೊತ್ತ ರೂ. 7,000 ಕೋಟಿ ರೂ. ಆಗಿರುತ್ತದೆ ಎಂದರು.

ನೂತನ ಆದಾಯ ತೆರಿಗೆ ವ್ಯವಸ್ಥೆಯಡಿಯಲ್ಲಿ, ರೂ. 3 ಲಕ್ಷವರೆಗಿನ ವಾರ್ಷಿಕ ಆದಾಯಕ್ಕೆ ಯಾವುದೇ ತೆರಿಗೆ ವಿಧಿಸಲಾಗಿಲ್ಲ. ಹೊಸ ತೆರಿಗೆ ವ್ಯವಸ್ಥೆಯಡಿಯಲ್ಲಿ ವ್ಯಕ್ತಿಗಳು, ಹಿರಿಯ ನಾಗರಿಕರು ಮತ್ತು ಅತಿ ಹಿರಿಯ ನಾಗರಿಕರೆಲ್ಲರೂ ಒಂದೇ ತೆರಿಗೆ ಹಂತದ ವ್ಯಾಪ್ತಿಯಲ್ಲಿ ಬರುತ್ತಾರೆ.

ನೂತನ ಆದಾಯ ತೆರಿಗೆ ವ್ಯವಸ್ಥೆಯನ್ನು 2023 ಫೆಬ್ರವರಿಯಲ್ಲಿ ಘೋಷಿಸಲಾಗಿತ್ತು. ಅದು ಆ ವರ್ಷದ ಎಪ್ರಿಲ್ನಿಂದ ಜಾರಿಗೆ ಬಂದಿದೆ.

ಆದಾಯ ತೆರಿಗೆ ವ್ಯವಸ್ಥೆಯ ಸರಳೀಕರಣ: ನಿರ್ಮಲಾ ಸೀತಾರಾಮನ್ ಭರವಸೆ

ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರಿಗಾಗಿ ತೆರಿಗೆ ವ್ಯವಸ್ಥೆಯನ್ನು ಸರಳೀಕರಣಗೊಳಿಸುವ ಭರವಸೆಯನ್ನು ನಿರ್ಮಲಾ ಸೀತಾರಾಮನ್ ನೀಡಿದ್ದಾರೆ. ವರ್ಷಗಳಿಂದ ತೆಗೆದುಕೊಳ್ಳಲಾಗಿರುವ ಕ್ರಮಗಳ ಮಾದರಿಯಲ್ಲೇ ತೆರಿಗೆ ವ್ಯವಸ್ಥೆಯನ್ನು ಸರಳೀಕರಣಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತನ್ನ ಬಜೆಟ್ ಭಾಷಣದಲ್ಲಿ ಅವರು ಹೇಳಿದರು. ತೆರಿಗೆ ಹಂತಗಳು ಮತ್ತು ನಿಯಮಗಳನ್ನು ಸರಳೀಕರಿಸುವುದಕ್ಕೆ ಸರಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದರು.

2023-24ರ ಆರ್ಥಿಕ ವರ್ಷದಲ್ಲಿ, ಮೂರನೇ ಎರಡಕ್ಕಿಂತಲೂ ಹೆಚ್ಚಿನ ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರು ನೂತನ ಆದಾಯ ತೆರಿಗೆ ವ್ಯವಸ್ಥೆಯನ್ನು ಸ್ವೀಕರಿಸಿದ್ದಾರೆ ಎಂದು ಅವರು ನುಡಿದರು.

2024ರ ಆರ್ಥಿಕ ವರ್ಷಕ್ಕಾಗಿ ‘ವಿವಾದದಿಂದ ವಿಶ್ವಾಸ ಯೋಜನೆ 3.0’ಯನ್ನು ಅವರು ಘೋಷಿಸಿದರು.

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ಪಿಎಸ್)ಯಡಿಯಲ್ಲಿ, ಉದ್ಯೋಗಿಯ ಮೂಲ ವೇತನಕ್ಕೆ ಉದ್ಯೋಗದಾತ ನೀಡುವ ದೇಣಿಗೆಯಿಂದ ಕಡಿತ ಮಾಡಲಾಗುವ ಮೊತ್ತವನ್ನು 10 ಶೇಕಡದಿಂದ 14 ಶೇಕಡಕ್ಕೆ ಹೆಚ್ಚಿಸಲಾಗುವುದು ಎಂಬುದಾಗಿಯೂ ಹಣಕಾಸು ಸಚಿವೆ ಘೋಷಿಸಿದರು.

ಇದು ಸಾರ್ವಜನಿಕ ಮತ್ತು ಖಾಸಗಿ ಎರಡೂ ಕ್ಷೇತ್ರಗಳ ಕಂಪೆನಿಗಳಿಗೆ ಅನ್ವಯಿಸುವುದು ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News