ಆರೆಸ್ಸೆಸ್-ಬಿಜೆಪಿ ನಡುವೆ ಒಡಕು?; ಸ್ಪಷ್ಟನೆ ನೀಡಿದ ಆರೆಸ್ಸೆಸ್ ಮೂಲಗಳು
ಹೊಸದಿಲ್ಲಿ: “ನಿಜವಾದ ಸೇವಕ ಅಹಂಕಾರಿಯಾಗಿರುವುದಿಲ್ಲ,” ಎಂದು ಇತ್ತೀಚೆಗೆ ಹೇಳುವ ಮೂಲಕ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಪ್ರಧಾನಿ ನರೇಂದ್ರ ಮೋದಿಯನ್ನು ಪರೋಕ್ಷವಾಗಿ ಟೀಕೆ ಮಾಡಿದ್ದಾರೆಂದು ತಿಳಿಯಲಾಗಿದೆ. ಇದರ ಬೆನ್ನಲ್ಲೇ ಆರೆಸ್ಸೆಸ್ ಮುಖಂಡ ಇಂದ್ರೇಶ್ ಕುಮಾರ್ ಪ್ರತಿಕ್ರಿಯಿಸಿ “ರಾಮನನ್ನು ಪೂಜಿಸಿದವರು ಆದರೆ ಅಹಂಕಾರ ಮೆರೆದವರನ್ನು 241ಕ್ಕೆ ನಿಲ್ಲಿಸಲಾಯಿತು, ಆದರೆ ಅದು ಅತ್ಯಂತ ದೊಡ್ಡ ಪಕ್ಷ ಆಯಿತು ಮತ್ತು ರಾಮನ ಮೇಲೆ ಭಕ್ತಿ ಇಲ್ಲದವರೆಲ್ಲರನ್ನೂ 234ಕ್ಕೆ ನಿಲ್ಲಿಸಲಾಯಿತು,” ಎಂದು ಹೇಳಿರುವುದು ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ನಡುವೆ ಬಿಜೆಪಿ ಮತ್ತು ಆರೆಸ್ಸೆಸ್ ನಡುವೆ ಬಿರುಕು ಮೂಡಿದೆ ಎಂಬ ಕುರಿತು ಚರ್ಚೆಗೂ ಗ್ರಾಸವೊದಗಿಸಿತ್ತು.
ಇದರ ನಡುವೆ ಇಂದ್ರೇಶ್ ಕುಮಾರ್ ಸ್ಪಷ್ಟೀಕರಣ ನೀಡಿ “ದೇಶದ ವಾತಾವರಣ ಈಗ ಸ್ಪಷ್ಟವಾಗಿದೆ. ರಾಮನನ್ನು ವಿರೋಧಿಸಿದವರು ಅಧಿಕಾರದಿಂದ ಹೊರಗಿದ್ದಾರೆ ಮತ್ತು ರಾಮನ ಮೇಲೆ ಭಕ್ತಿ ಇರಿಸಿದವರು ಅಧಿಕಾರದಲ್ಲಿದ್ದಾರೆ ಮತ್ತು ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮೂರನೇ ಬಾರಿಗೆ ಸರ್ಕಾರ ರಚನೆಯಾಗಿದೆ. ಜನರಲ್ಲಿ ವಿಶ್ವಾಸವಿದೆ, ಈ ವಿಶ್ವಾಸ ಮುಂದುವರಿಯಲಿದೆ ಎಂದು ಆಶಿಸುತ್ತೇವೆ,” ಎಂದು ಹೇಳುವ ಮೂಲಕ ಹಿಂದಿನ ಹೇಳಿಕೆಯಿಂದ ಯು-ಟರ್ನ್ ಮಾಡಿದ್ದಾರೆ.
ತರುವಾಯ, ಆರೆಸ್ಸೆಸ್ ಮತ್ತು ಬಿಜೆಪಿ ನಡುವೆ ಭಿನ್ನಾಭಿಪ್ರಾಯವಿಲ್ಲ ಎಂದು ಆರೆಸ್ಸೆಸ್ ಮೂಲಗಳು ಸ್ಪಷ್ಟಪಡಿಸಿವೆ.
“2014 ಮತ್ತು 2019 ಚುನಾವಣೆಗಳ ನಂತರ ಭಾಗ್ವತ್ ನೀಡಿದ್ದ ಭಾಷಣಗಳಿಗೂ ಈಗಿನ ಚುನಾವಣೆಯ ನಂತರದ ಭಾಷಣಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ. ಯಾವುದೇ ಭಾಷಣವು ಸಾರ್ವತ್ರಿಕ ಚುನಾವಣೆಯಂತಹ ಮಹತ್ವದ ವಿಷಯವನ್ನು ಉಲ್ಲೇಖಿಸುವುದು ಸಹಜ. ಆದರೆ ಅವರ ಮಾತುಗಳನ್ನು ತಪ್ಪಾಗಿ ಅರ್ಥೈಸಿ ಗೊಂದಲವುಂಟು ಮಾಡಲಾಗಿದೆ. ಅವರು ಅಹಂಕಾರ ಪದ ಬಳಸಿರುವುದು ಪ್ರಧಾನಿ ನರೇಂದ್ರ ಮೋದಿ ಅಥವಾ ಯಾವುದೇ ಬಿಜೆಪಿ ನಾಯಕರ ವಿರುದ್ಧವಲ್ಲ,” ಎಂದು ಆರೆಸ್ಸೆಸ್ ಮೂಲಗಳು ತಿಳಿಸಿವೆ.