ರಫೆಲ್‌ ನಡಾಲ್ ನಿವೃತ್ತಿ | ಭಾವನಾತ್ಮಕ ಸಂದೇಶ ಹಂಚಿಕೊಂಡ ರೋಜರ್ ಫೆಡರರ್

Update: 2024-10-10 13:41 GMT
PC : NDTV 

ಬರ್ನ್: 22 ಬಾರಿಯ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ವಿಜೇತ ಹಾಗೂ ತಮ್ಮ ಪ್ರತಿಸ್ಪರ್ಧಿ ರಫೆಲ್‌ ನಡಾಲ್ ನಿವೃತ್ತಿಗೆ ಸ್ವಿಝರ್ ಲೆಂಡ್ ನ ದಂತಕತೆ ಟೆನಿಸ್ ಆಟಗಾರ ರೋಜರ್ ಫೆಡರರ್ ಗೌರವ ವಿದಾಯ ಸೂಚಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ 20 ಬಾರಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಜಯಿಸಿ ನಿವೃತ್ತರಾಗಿರುವ ರೋಜರ್ ಫೆಡರರ್, “ಎಂತಹ ವೃತ್ತಿಜೀವನ ರಫಾ! ಈ ದಿನ ಬಾರದಿರಲೆಂದು ನಾನು ಯಾವತ್ತೂ ಬಯಸಿದ್ದೆ” ಎಂದು ಬರೆದುಕೊಂಡಿದ್ದಾರೆ.

“ನಾವು ಪ್ರೀತಿಸುವ ಆಟದಲ್ಲಿನ ಅವಿಸ್ಮರಣೀಯ ಕ್ಷಣಗಳು ಹಾಗೂ ನಿಮ್ಮ ಎಲ್ಲ ಅದ್ಭುತ ಸಾಧನೆಗಳಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಇದೇ ಸೂಕ್ತ ಗೌರವ!” ಎಂದೂ ಹೇಳಿದ್ದಾರೆ.

2004ರಲ್ಲಿ ಮಿಯಾಮಿಯಲ್ಲಿ ರೋಜರ್ ಫೆಡರರ್ ಅವರನ್ನು ರಫೆಲ್‌ ನಡಾಲ್ ಎದುರುಗೊಂಡಾಗ ಅವರಿಗೆ ಕೇವಲ 17 ವರ್ಷ ವಯಸ್ಸಾಗಿತ್ತು ಹಾಗೂ 34ನೇ ಶ್ರೇಯಾಂಕಿತರಾಗಿದ್ದರು.

ಆ ಸಂದರ್ಭದಲ್ಲಿ ರೋಜರ್ ಫೆಡರರ್ ವಿಶ್ವದ ಅಗ್ರ ಕ್ರಮಾಂಕದ ಆಟಗಾರರಾಗಿದ್ದರು ಹಾಗೂ ಆ ವರ್ಷದಲ್ಲಿ ಅವರು ಆಸ್ಟ್ರೇಲಿಯನ್ ಓಪನ್ ಹಾಗೂ ಇಂಡಿಯನ್ ವೆಲ್ಸ್ ಪ್ರಶಸ್ತಿಗಳನ್ನು ಜಯಿಸಿದ್ದರು.

ಅವರಿಬ್ಬರ ನಡುವಿನ ಪ್ರತಿಸ್ಪರ್ಧೆ ಸುಮಾರು ಎರಡು ದಶಕಗಳ ಕಾಲ ಮುಂದುವರಿದಿತ್ತು. ಸೆಪ್ಟೆಂಬರ್ 2022ರಲ್ಲಿ ಲಂಡನ್ ನಲ್ಲಿ ಆಯೋಜನೆಗೊಂಡಿದ್ದ ಲ್ಯಾವರ್ ಕಪ್ ಪಂದ್ಯಾವಳಿಯಲ್ಲಿ ರೋಜರ್ ಫೆಡರರ್ ತಮ್ಮ ನಿವೃತ್ತಿ ಘೋಷಿಸಿದ ನಂತರ, ಅವರಿಬ್ಬರ ಪ್ರತಿಸ್ಪರ್ಧೆಗೆ ತೆರೆ ಬಿದ್ದಿತ್ತು.

ರೋಜರ್ ಫೆಡರರ್ ಎದುರಿನ ಪಂದ್ಯಗಳಲ್ಲಿ 24-16 ಅಂತರದ ಗೆಲುವು ದಾಖಲಿಸಿರುವ ರಫೆಲ್‌ ನಡಾಲ್, 2008ರಲ್ಲಿ ಜಯಿಸಿದ ರೋಮಾಂಚಕ ವಿಂಬಲ್ಡನ್ ಪ್ರಶಸ್ತಿ ಸೇರಿದಂತೆ 6-3ರ ಅಂತರದಲ್ಲಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. 2008ರ ವಿಂಬಲ್ಡನ್ ಫೈನಲ್ ಪಂದ್ಯವನ್ನು ಈ ಇಬ್ಬರು ದಿಗ್ಗಜರ ನಡುವೆ ನಡೆದಿದ್ದ ಅತ್ಯದ್ಭುತ ಪಂದ್ಯ ಎಂದೇ ಪರಿಗಣಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News