ಆರ್‌ಟಿಐ ಕಾರ್ಯಕರ್ತ ಅಮಿತ್ ಜೇಠವಾ ಹತ್ಯೆ ಪ್ರಕರಣ: ಮಾಜಿ ಬಿಜೆಪಿ ಸಂಸದ, ಇತರ ಆರು ಜನರನ್ನು ಖುಲಾಸೆಗೊಳಿಸಿದ ಗುಜರಾತ್ ಹೈಕೋರ್ಟ್
ಅಹ್ಮದಾಬಾದ್,ಮೇ 6: 2010ರಲ್ಲಿ ನಡೆದಿದ್ದ ಆರ್‌ಟಿಐ ಕಾರ್ಯಕರ್ತ ಅಮಿತ್ ಜೇಠವಾ ಹತ್ಯೆ ಪ್ರಕರಣದಲ್ಲಿ ಜುನಾಗಡದ ಮಾಜಿ ಬಿಜೆಪಿ ಸಂಸದ ದಿನು ಬೋಘಾ ಸೋಲಂಕಿ ಮತ್ತು ಇತರ ಆರು ಜನರನ್ನು ಗುಜರಾತ್ ಉಚ್ಚ ನ್ಯಾಯಾಲಯವು ಸೋಮವಾರ ಖುಲಾಸೆಗೊಳಿಸಿದೆ.
ಸೋಲಂಕಿ ಮತ್ತು ಇತರ ಆರು ಜನರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದ್ದ ವಿಶೇಷ ಸಿಬಿಐ ನ್ಯಾಯಾಲಯದ 2019,ಜು.11ರ ತೀರ್ಪನ್ನು ರದ್ದುಗೊಳಿಸಿದ ಉಚ್ಚ ನ್ಯಾಯಾಲಯವು,ಸತ್ಯವನ್ನು ಖಾಯಂ ಆಗಿ ಹೂತು ಹಾಕಲು ಎಲ್ಲ ಪ್ರಯತ್ನಗಳನ್ನು ಮಾಡಲಾಗಿದೆ. ಪ್ರಕರಣದ ರೂವಾರಿಯು ಅದನ್ನು ಮಾಡುವಲ್ಲಿ ಯಶಸ್ವಿಯಾಗಿದ್ದ ಮತ್ತು ವಿಚಾರಣಾ ನ್ಯಾಯಾಲಯವು ದೋಷನಿರ್ಣಯದ ಪೂರ್ವ ನಿರ್ಧರಿತ ಕಲ್ಪನೆಯೊಂದಿಗೆ ವಿಚರಣೆಯನ್ನು ನಡೆಸಿತ್ತು ಎಂದು ಹೇಳಿತು.
ತೀರ್ಪಿನ ಭಾಗವೊಂದನ್ನು ಓದಿದ ನ್ಯಾಯಮೂರ್ತಿಗಳಾದ ಎ.ಎಸ್.ಸುಪೇಹಿಯಾ ಮತ್ತು ವಿಮಲ ವ್ಯಾಸ್ ಅವರ ಪೀಠವು,‘ಅಪರಾಧದ ತನಿಖೆಯು ಆರಂಭದಿಂದಲೂ ಕಾಟಾಚಾರದ್ದಾಗಿತ್ತು ಮತ್ತು ಪೂರ್ವಾಗ್ರಹ ಪೀಡಿತವಾಗಿತ್ತು. ಸಾಕ್ಷಿಗಳ ವಿಶ್ವಾಸವನ್ನು ಗಳಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲಗೊಂಡಿದೆ ’ ಎಂದು ಹೇಳಿತು.
2010,ಜು.20ರಂದು ಗುಜರಾತ್ ಉಚ್ಚ ನ್ಯಾಯಾಲಯದ ಎದುರಿನ ಸತ್ಯಮೇವ ಕಾಂಪ್ಲೆಕ್ಸ್‌ನ ಮುಂದೆ ಜೇಠವಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಕೊಲೆ ನಡೆದಾಗ ದೂರುದಾರ ಪೋಲಿಸ್ ಕಾನ್‌ಸ್ಟೇಬಲ್ ಸ್ಥಳದಿಂದ ಕೆಲವೇ ಅಡಿಗಳ ದೂರದಲ್ಲಿದ್ದರು. ಅವರು ಓಡಿ ಪರಾರಿಯಾಗುತ್ತಿದ್ದ ದಾಳಿಕೋರರನ್ನು ಬೆನ್ನಟ್ಟಿದ್ದರು. ಮೊದಲ ತನಿಖಾಧಿಕಾರಿ ಕೇವಲ 55 ಸೆಕೆಂಡ್‌ಗಳಲ್ಲಿ ಮತ್ತು ಹಿರಿಯ ಪೋಲಿಸ್ ಅಧಿಕಾರಿ 20 ನಿಮಿಷಗಳಲ್ಲಿ ಘಟನಾ ಸ್ಥಳವನ್ನು ತಲುಪಿದ್ದರು. ಆದಾಗ್ಯೂ ದಾಳಿಕೋರರನ್ನು ಬಂಧಿಸಲು ಸಾಧ್ಯವಾಗಲಿಲ್ಲ ಮತ್ತು ಅವರು ಪರಾರಿಯಾಗುವಲ್ಲಿ ಸಫಲರಾಗಿದ್ದರು ಎನ್ನುವುದು ದಿಗ್ಭ್ರಮೆಯನ್ನು ಮೂಡಿಸಿದೆ. ಸತ್ಯವನ್ನು ಖಾಯಂ ಅಗಿ ಮುಚ್ಚಿ ಹಾಕಲು ಎಲ್ಲ ಪ್ರಯತ್ನಗಳನ್ನು ಮಾಡಲಾಗಿತ್ತು ಎಂದು ಪೀಠವು ಹೇಳಿತು.
ಜೇಠವಾ ಆರ್‌ಟಿಐ ಮೂಲಕ ಮಾಹಿತಿಯನ್ನು ಪಡೆದುಕೊಂಡು ಸಿಂಹಗಳ ಅಭಯಧಾಮ ಗಿರ್ ಅರಣ್ಯದಲ್ಲಿ ಅಕ್ರಮ ಗಣಿಗಾರಿಕೆ ಚಟುವಟಿಕೆಗಳನ್ನು ಬಯಲಿಗೆಳೆಯುತ್ತಿದ್ದರು.
ಪ್ರಕರಣವು ಈ ಹಿಂದೆ ಹಲವಾರು ತಿರುವುಗಳನ್ನು ಕಂಡಿತ್ತು. ಮೊದಲು ಪ್ರಕರಣದ ತನಿಖೆಯನ್ನು ನಡೆಸಿದ್ದ ಅಹ್ಮದಾಬಾದ್ ಕ್ರೈಂ ಬ್ರ್ಯಾಂಚ್ ಸೋಲಂಕಿಗೆ ಕ್ಲೀನ್ ಚಿಟ್ ನೀಡಿತ್ತು ಮತ್ತು ಇತರ ಆರು ಆರೋಪಿಗಳನ್ನು ಬಂಧಿಸಿತ್ತು. ಹೆಚ್ಚಿನ ತನಿಖೆಯನ್ನು ಕೋರಿ ಜೇಠವಾರ ತಂದೆ ಬಿಖಾ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು ಮತ್ತು ಅದು ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿತ್ತು. ಸೋಲಂಕಿಯವರನ್ನು ಬಂಧಿಸಿದ್ದ ಸಿಬಿಐ ದೋಷಾರೋಪ ಪಟ್ಟಿಯಲ್ಲಿ ಅವರನ್ನು ಮೊದಲ ಆರೋಪಿಯನ್ನಾಗಿಸಿತ್ತು,ಅವರ ವಿರುದ್ಧ ಕೊಲೆ,ಪಿತೂರಿ ಮತ್ತು ಇತರ ಆರೋಪಗಳನ್ನು ಹೊರಿಸಲಾಗಿತ್ತು.
ಬಳಿಕ ವಿಚಾರಣೆಗಾಗಿ ಪ್ರಕರಣಗಳನ್ನು ಒಂದುಗೂಡಿಸಲಾಗಿತ್ತು. ವಿಚಾರಣೆಯ ಸಂದರ್ಭದಲ್ಲಿ ಹಲವಾರು ಸಾಕ್ಷಿಗಳು ಬೆದರಿಕೆಗಳಿಂದಾಗಿ ಪ್ರತಿಕೂಲ ಸಾಕ್ಷ್ಯವನ್ನು ನುಡಿದಿದ್ದರು.
195 ಸಾಕ್ಷಿಗಳ ಪೈಕಿ 105 ಜನರು ಪ್ರತಿಕೂಲ ಸಾಕ್ಷ್ಯ ನುಡಿದಿದ್ದಾರೆ ಎಂಬ ಕಾರಣವನ್ನಿಟ್ಟುಕೊಂಡು ಜೇಠವಾರ ತಂದೆ ಹೊಸದಾಗಿ ವಿಚಾರಣೆಯನ್ನು ಕೋರಿ ಮತ್ತೊಮ್ಮೆ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು ಮತ್ತು ಆ ವೇಳೆ ವಿಚಾರಣೆ ಅಂತ್ಯಗೊಂಡಿತ್ತು. ಅವರ ಅರ್ಜಿಯನ್ನು ಪುರಸ್ಕರಿಸಿದ ಉಚ್ಚ ನ್ಯಾಯಾಲಯವು ಹೊಸದಾಗಿ ವಿಚಾರಣೆಗೆ ಆದೇಶಿಸಿತ್ತು. ಇದರ ವಿರುದ್ಧ ಸೋಲಂಕಿ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದು,ಅದು ಹೊಸದಾಗಿ ವಿಚಾರಣೆಯ ಬದಲು ಕೇವಲ 26 ಪ್ರಮುಖ ಸಾಕ್ಷಿಗಳನ್ನು ಮತ್ತೊಮ್ಮೆ ಪಾಟೀಸವಾಲಿಗೆ ಒಳಪಡಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿತ್ತು.