RTI ಅರ್ಜಿ: ಮಣಿಪುರ ಸರ್ಕಾರದಿಂದ ಕೇಂದ್ರ, ರಾಷ್ಟ್ರಪತಿ ಭವನಕ್ಕೆ ಬಂದ ವರದಿಗಳ ಮಾಹಿತಿ ನೀಡಲು ನಿರಾಕರಿಸಿದ ಕೇಂದ್ರ ಸರ್ಕಾರ, ರಾಷ್ಟ್ರಪತಿ ಭವನ

Update: 2023-09-07 11:41 GMT

Photo: PTI

ಹೊಸದಿಲ್ಲಿ: ಮಣಿಪುರದಲ್ಲಿ ನಾಲ್ಕು ತಿಂಗಳುಗಳ ಹಿಂದೆ ಜನಾಂಗೀಯ ಸಂಘರ್ಷ ಆರಂಭಗೊಂಡಂದಿನಿಂದ ಅಲ್ಲಿನ ರಾಜ್ಯ ಸರ್ಕಾರದಿಂದ ದೊರೆತ ಮಾಹಿತಿಗಳನ್ನು ಬಹಿರಂಗಪಡಿಸಲು ಕೇಂದ್ರ ಗೃಹ ಸಚಿವಾಲಯ ಮತ್ತು ರಾಷ್ಟ್ರಪತಿ ಭವನ ನಿರಾಕರಿಸಿದೆ ಎಂದು thewire.in ವರದಿ ಮಾಡಿದೆ.

ಮೇ 3ರಿಂದ ಆರಂಭಗೊಂಡ ಜನಾಂಗೀಯ ಸಂಘರ್ಷದಲ್ಲಿ ಇಲ್ಲಿಯ ತನಕ 160ಕ್ಕೂ ಅಧಿಕ ಮಂದಿ ಬಲಿಯಾಗಿ ಸಾವಿರಾರು ಮಂದಿ ತಮ್ಮ ಮನೆಗಳನ್ನು ಕಳೆದುಕೊಂಡು ಪರಿಹಾರ ಶಿಬಿರಗಳಲ್ಲಿ ವಾಸಿಸುವಂತಾಗಿದೆ.

ಮಾಹಿತಿ ಹಕ್ಕು ಕಾರ್ಯಕರ್ತ ವೆಂಕಟೇಶ್‌ ನಾಯಕ್‌ ಅವರು ಆರ್‌ಟಿಐ ಮೂಲಕ ಈ ಮಾಹಿತಿಯನ್ನು ಆರ್‌ಟಿಐ ಕಾಯಿದೆ 2005 ಇದರ ಸೆಕ್ಷನ್‌ 7(1) ಅನ್ವಯ ಕೋರಿದ್ದರು. ಈ ಸೆಕ್ಷನ್‌ ಅನ್ವಯ, ಜನರ ಜೀವ ಮತ್ತು ಸ್ವಾತಂತ್ರ್ಯದ ವಿಚಾರಗಳ ಕುರಿತ ಮಾಹಿತಿ ಕೇಳಲಾಗಿದ್ದರೆ ಅರ್ಜಿ ದೊರೆತ 48 ಗಂಟೆಗಳೊಳಗೆ ಅವುಗಳನ್ನು ನೀಡಬೇಕಿದೆ.

ನಿಯಮ 10 ಹಾಗೂ ಟ್ರಾನ್ಸಾಕ್ಷನ್‌ ಆಫ್‌ ಬಿಸಿನೆಸ್‌ ನಿಯಮಗಳು 1961 ಅನ್ವಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಂತರಿಕ ರಾಜಕೀಯ ಸ್ಥಿತಿಯ ವಿವರಗಳನ್ನು ಪ್ರತಿ 15 ದಿನಗಳಿಗೊಮ್ಮೆ ಗುಪ್ತಚರ ಬ್ಯುರೋದ ನಿರ್ದೇಶಕರಿಂದ ಗುಪ್ತಚರ ವಿವರಗಳ ಸಾರಾಂಶದೊಂದಿಗೆ ಕಳುಹಿಸಬೇಕಾಗಿದೆ. ಈ ಕುರಿತು ಮಾಹಿತಿಯನ್ನೂ ಆರ್‌ಟಿಐ ಮೂಲಕ ನಾಯಕ್‌ ಕೋರಿದ್ದರು.

ಜುಲೈ 20ರಂದು ನಾಯಕ್‌ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಉತ್ತರ ಕೊಡಲು ನಿರಾಕರಿಸಿದ ಗೃಹ ವ್ಯಹಾರಗಳ ಸಚಿವಾಲಯ ಅದಕ್ಕೆ ಕಾಯಿದೆಯ ಸೆಕ್ಷನ್‌ 8(1)(ಎ) ಅನ್ನು ಉಲ್ಲೇಖಿಸಿದೆ. ಮಣಿಪುರ ರಾಜ್ಯಪಾಲೆ ಅನಸೂಯ ಯುಕೀ ಅವರಿಂದ ಬಂದ ಒಟ್ಟು ವರದಿಗಳು ಅವುಗಳ ದಿನಾಂಕ ಮತ್ತು ಅವುಗಳ ಪ್ರತಿಗಳನ್ನು ಕೇಳಲಾಗಿತ್ತು.

ಸೆಕ್ಷನ್‌ 8(1) (ಎ) ಪ್ರಕಾರ ದೇಶದ ಸಾರ್ವಭೌಮತೆಗೆ ಮತ್ತು ಸಮಗ್ರತೆಯನ್ನು ಬಾಧಿಸಬಲ್ಲ ಮಾಹಿತಿಯನ್ನು ಬಹಿರಂಗಪಡಿಸುವುದಕ್ಕೆ ವಿನಾಯಿತಿಯಿದೆ. ಇದನ್ನೇ ಬಳಸಿಕೊಂಡು ಎಲ್ಲಾ ಮಾಹಿತಿ ನಿರಾಕರಿಸಲಾಗಿದೆ.

ನಾಯಕ್‌ ಅವರು ರಾಷ್ಟ್ರಪತಿ ಭವನಕ್ಕೂ ಪ್ರತ್ಯೇಕ ಆರ್‌ಟಿಐ ಅರ್ಜಿ ಸಲ್ಲಿಸಿದ್ದರೆ ಆಗಸ್ಟ್‌ 7ರಂದು ದೊರೆತ ಉತ್ತರದಲ್ಲಿ ಯಾವುದೇ ಮಾಹಿತಿ ಇರಲಿಲ್ಲ ಹಾಗೂ ರಾಷ್ಟ್ರಪತಿ ಭವನ ಕೂಡ ಕಾಯಿದೆಯ ಸೆಕ್ಷನ್‌ 8(1) (ಎ) ಉಲ್ಲೇಖಿಸಿ ಮಾಹಿತಿ ನೀಡಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News