ಸ್ತ್ರೀದ್ವೇಷಿ ಹೇಳಿಕೆಗಾಗಿ ಶಾಮನೂರು ವಿರುದ್ಧ ಸೈನಾ ನೆಹ್ವಾಲ್ ವಾಗ್ದಾಳಿ

Update: 2024-03-30 15:15 GMT

ಸೈನಾ ನೆಹ್ವಾಲ್ | Photo: PTI 

ಹೊಸದಿಲ್ಲಿ: ಮಹಿಳೆಯರನ್ನು ಕೀಳಾಗಿ ಕಾಣುತ್ತಿರುವುದಕ್ಕಾಗಿ ಮತ್ತು ಅಡಿಗೆಮನೆಗೆ ಸೀಮಿತಗೊಳ್ಳುವಂತೆ ಅವರಿಗೆ ಸೂಚಿಸಿದ್ದಕ್ಕಾಗಿ ಕರ್ನಾಟಕದ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರ ವಿರುದ್ಧ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಹಾಗೂ ಒಲಿಂಪಿಕ್ ಪದಕ ವಿಜೇತೆ ಸೈನಾ ನೆಹ್ವಾಲ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರನ್ನು ಇತ್ತೀಚಿಗೆ ಅವಮಾನಿಸಿದ್ದ ಸ್ಥಳೀಯ ಶಾಸಕ ಶಾಮನೂರು (92), ‘ಮಹಿಳೆಯರಿಗೆ ಅಡಿಗೆಮನೆಯಲ್ಲಿ ಅಡಿಗೆ ಮಾಡುವುದು ಮಾತ್ರ ಗೊತ್ತು’ ಎಂದು ಟೀಕಿಸಿದ್ದರು.

ಗಾಯತ್ರಿ ವಿರುದ್ಧ ಸ್ತ್ರೀದ್ವೇಷಿ ಹೇಳಿಕೆಗಾಗಿ ಶನಿವಾರ ತನ್ನ ಎಕ್ಸ್ ಪೋಸ್ಟ್ ನಲ್ಲಿ ಶಾಮನೂರು ಅವರನ್ನು ಕಟುವಾಗಿ ಟೀಕಿಸಿರುವ ನೆಹ್ವಾಲ್,ಇಂತ ಹೇಳಿಕೆಗಳು ಕಾಂಗ್ರೆಸ್ ಪಕ್ಷದ ‘ಲಡ್ಕಿ ಹೂಂ ಲಡ್ ಸಕ್ತೀ ಹೂಂ ’ ಘೋಷಣೆಗೆ ತೀವ್ರ ವಿರುದ್ಧವಾಗಿವೆ ಎಂದು ಹೇಳಿದ್ದಾರೆ.

ತಾನು ಬ್ಯಾಡ್ಮಿಂಟನ್ ನಲ್ಲಿ ಉತ್ತಮ ಸಾಧನೆ ಮಾಡಿದ್ದನ್ನು ಮತ್ತು ದೇಶಕ್ಕಾಗಿ ಪದಕಗಳನ್ನು ಗೆದ್ದಿದ್ದನ್ನು ಎತ್ತಿ ತೋರಿಸಿರುವ ನೆಹ್ವಾಲ್,‘ನಾನು ಕ್ರೀಡಾಂಗಣದಲ್ಲಿ ಭಾರತಕ್ಕಾಗಿ ಪ್ರಶಸ್ತಿಗಳನ್ನು ಗೆದ್ದಾಗ ಕಾಂಗ್ರೆಸ್ ಪಕ್ಷವು ನಾನು ಏನು ಮಾಡಬೇಕು ಎನ್ನುವುದಕ್ಕೆ ಆದ್ಯತೆಯನ್ನು ನೀಡುತ್ತಿತ್ತು? ಎಲ್ಲ ಹುಡುಗಿಯರು ಮತ್ತು ಮಹಿಳೆಯರು ತಮ್ಮ ಇಷ್ಟದ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡುವ ಕನಸು ಕಾಣುತ್ತಿರುವಾಗ ಇಂತಹ ಹೇಳಿಕೆಗಳನ್ನು ಏಕೆ ನೀಡಬೇಕು ಎಂದು ಪ್ರಶ್ನಿಸಿದ್ದಾರೆ.

ಮಹಿಳೆಯರನ್ನು ಬಲಗೊಳಿಸಲು ಮತ್ತು ಮಹಿಳಾ ಸಬಲೀಕರಣವನ್ನು ಪ್ರಶಂಸಿಸಲು ಇದು ಸಕಾಲವಾಗಿದೆ,ಆದರೆ ಬದಲಿಗೆ ಶಾಮನೂರು ಶಿವಶಂಕರಪ್ಪ ಅವರಂತಹ ವ್ಯಕ್ತಿಗಳು ಸ್ತ್ರೀದ್ವೇಷಿಗಳಾಗುತ್ತಿದ್ದಾರೆ ಎಂದು ಕುಟುಕಿರುವ ನೆಹ್ವಾಲ್,‘ಒಂದೆಡೆ ನಾವು ನಾರಿ ಶಕ್ತಿಗೆ ವಂದನೆಯನ್ನು ನೋಡುತ್ತಿದ್ದೇವೆ,ಪ್ರಧಾನಿ ಮೋದಿಯವರ ನಾಯಕತ್ವದಡಿ ಮಹಿಳಾ ಮೀಸಲಾತಿ ಮಸೂದೆಯು ಅಂಗೀಕಾರಗೊಂಡಿದೆ. ಇನ್ನೊಂದೆಡೆ ನಾರಿ ಶಕ್ತಿಗೆ ಅಪಮಾನ ಮತ್ತು ಸ್ತ್ರೀದ್ವೇಷಿ ಜನರನ್ನು ನೋಡುತ್ತಿದ್ದೇವೆ. ಇದು ನಿಜಕ್ಕೂ ಕಳವಳಕಾರಿ ’ ಎಂದು ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News