ಕಣ್ಣೀರಿಟ್ಟು ನಿವೃತ್ತಿ ಘೋಷಿಸಿದ ಸಾಕ್ಷಿ ಮಲಿಕ್: ರಕ್ಷಾ ಬಂಧನದಂದು ಪ್ರಧಾನಿ ಮೋದಿ ಅಭಿನಂದನಾ ಟ್ವೀಟ್‌ ಮುನ್ನಲೆಗೆ

Update: 2023-12-22 14:50 GMT

Photo : PTI 

ಹೊಸದಿಲ್ಲಿ: ಭಾರತೀಯ ಕುಸ್ತಿ ಫೆಡೆರೇಶನ್‌ ಚುನಾವಣೆಯಲ್ಲಿ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಮಾಜಿ ಮುಖ್ಯಸ್ಥ, ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಸಿಂಗ್‌ ಆಪ್ತ ಗೆಲುವು ಸಾಧಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿದ್ದು, ಪತ್ರಿಕಾಗೋಷ್ಠಿಯಲ್ಲಿ ಕುಸ್ತಿಪಟುಗಳು ಕಣ್ಣೀರು ಸುರಿಸಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅಂತರಾಷ್ಟ್ರೀಯ ಪದಕ ಗೆದ್ದ ಮಹಿಳಾ ಕುಸ್ತಿಪಟುಗಳಿಗೆ ರಕ್ಷಣೆ ನೀಡಲು ವಿಫಲವಾಗಿದೆ, ಸಾಮಾನ್ಯ ಹೆಣ್ಣು ಮಕ್ಕಳ ಕತೆಯೇನು ಎಂದು ನೆಟ್ಟಿಗರು ಪ್ರಶ್ನಿಸಲು ಆರಂಭಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳ ಮೈಕ್‌ ಇಡುವ ಮೇಜಿನ ಮೇಲೆ‌ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ತನ್ನ ಬೂಟುಗಳನ್ನು ಕಳಚಿಟ್ಟು, ಕ್ರೀಡೆಗೆ ನಿವೃತ್ತಿ ನೀಡುವುದಾಗಿ ಅಳುತ್ತಾ ಘೋಷಿಸಿದ್ದು, ಭಾರೀ ಗಮನ ಸೆಳೆದಿದೆ.

ಈ ನಡುವೆ, ಪ್ರಧಾನಿ ನರೇಂದ್ರ ಮೋದಿ ಅವರು 2016ರ ರಿಯೋ ಒಲಿಂಪಿಕ್ಸ್‌ ನಲ್ಲಿ ಪದಕ ಗೆದ್ದಿದ್ದ ಸಾಕ್ಷಿ ಮಲಿಕ್‌ರನ್ನು ಅಭಿನಂದಿಸಿದ್ದ ಹಳೆಯ ಟ್ವೀಟ್‌ ವೈರಲ್ ಆಗಿದೆ.

“ರಕ್ಷಾ ಬಂಧನದ ಈ ಶುಭ ದಿನದಂದು, ಭಾರತದ ಮಗಳು ಸಾಕ್ಷಿ ಮಲಿಕ್ ಕಂಚಿನ ಪದಕವನ್ನು ಗೆದ್ದು ನಮಗೆಲ್ಲರಿಗೂ ಹೆಮ್ಮೆ ತಂದಿದ್ದಾರೆ.” ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿ ಅಭಿನಂದಿಸಿದ್ದರು.

ಈ ಟ್ವೀಟನ್ನು ಮತ್ತೆ ಮುನ್ನೆಲೆಗೆ ತಂದ ನೆಟ್ಟಿಗರು, ನಿಮ್ಮ ಅಧಿಕಾರವಧಿಯಲ್ಲಿ ಭಾರತದ ಮಗಳಿಗೆ ನ್ಯಾಯ ದೊರಕಿಸಿ ಕೊಡಲು ಆಗಿಲ್ಲ, ಭಾರತಕ್ಕೆ ಹೆಮ್ಮೆ ತಂದಿದ್ದ ಮಗಳು ಶಾಶ್ವತವಾಗಿ ಕುಸ್ತಿ ತೊರೆದು ಹೋಗುವಂತೆ ಮಾಡಿದ್ದೀರಿ, ಈ ಟ್ವೀಟನ್ನು ಅಳಿಸಿ ಹಾಕಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ನರೇಂದ್ರ ಮೋದಿ ಅವರು ಭಾರತದ ಹೆಣ್ಣು ಮಕ್ಕಳು ಪದಕ ಗೆದ್ದಾಗ ಮಾತ್ರ ಅವರನ್ನು ಅಭಿನಂದಿಸುತ್ತಾರೆ, ಯಾಕೆಂದರೆ ಅವರೊಂದಿಗೆ ಫೋಟೋಗಳಿಗೆ ಪೋಸ್‌ ಕೊಡಬಹುದು. ಆದರೆ, ಅದೇ ಹೆಣ್ಣು ಮಕ್ಕಳು (ಬ್ರಿಜ್‌ ಭೂಷಣ್)‌ ಸಿಂಗ್‌ ನಡೆಸಿದ ಲೈಂಗಿಕ ದೌರ್ಜನ್ಯಗಳ ಬಗ್ಗೆ ದೂರಿದರೆ, ಸಿಂಗ್‌ಗೆ ಬೆಂಬಲ ನೀಡಿದ್ದಾರೆ ಎಂದು ಸ್ವಾತಿ ಚತುರ್ವೇದಿ ಟ್ವೀಟ್‌ ಮಾಡಿದ್ದಾರೆ.

“ರಕ್ಷಾ ಬಂಧನ!! ಸಹೋದರರು ಸಹೋದರಿಯರನ್ನು ರಕ್ಷಿಸುವ ಪ್ರತಿಜ್ಞೆ ಮಾಡುವ ಮಂಗಳಕರ ಹಿಂದೂ ಹಬ್ಬ!! ಸಹೋದರಿ (ಮಹಿಳಾ ಕುಸ್ತಿಪಟುಗಳು) ಒಂದು ವರ್ಷ ರಸ್ತೆಯಲ್ಲೇ ಇದ್ದಳು. ಅಪರಾಧಿಯು ಅವಳ ದೇಹವನ್ನು ಸುಲಭವಾಗಿ ಪ್ರವೇಶಿಸಬಹುದು, ಯಾವ ರೀತಿಯ ಸಹೋದರ ಇದನ್ನು ಮಾಡಲು ಬಿಡುತ್ತಾನೆ?” ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ.

ರಕ್ಷಾ ಬಂಧನ ಅದರ ಅರ್ಥ ಕಳೆದುಕೊಂಡಿದೆ ಎಂದು ಅರುಣ್‌ ಎಂಬ x ಬಳಕೆದಾರರು ಟ್ವೀಟ್‌ ಮಾಡಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News