ನಾನು ಯಾವ ಪರಿಸ್ಥಿತಿ ಎದುರಿಸುತ್ತಿದ್ದೇನೆ ಎಂದು ನನಗೆ ಮಾತ್ರ ತಿಳಿದಿದೆ : ನಟ ಸಲ್ಮಾನ್ ಖಾನ್

Update: 2024-10-20 13:53 GMT

 ಸಲ್ಮಾನ್ ಖಾನ್ | PTI 

ಹೊಸದಿಲ್ಲಿ : ನಾನು ಜೀವನದಲ್ಲಿ ಯಾವ ಪರಿಸ್ಥಿತಿ ಎದುರಿಸುತ್ತಿದ್ದೇನೆ ಎಂದು ನನಗೆ ಮಾತ್ರ ಗೊತ್ತು. ಈ ಜಗಳವನ್ನು ಬಿಡಿಸಲು ನಾನೇ ಇಲ್ಲಿಗೆ ಬರಬೇಕು. ಇಂದು ನಾನು ಇಲ್ಲಿಗೆ ಬರಬಾರದಿತ್ತು. ಆದರೆ ಏನು ಮಾಡುವುದು? ನನ್ನ ವೃತ್ತಿ ಬದ್ಧತೆ. ಅದಕ್ಕಾಗಿ ಇಲ್ಲಿಗೆ ಬಂದಿದ್ದೇನೆ” ಎಂದು ಸಲ್ಮಾನ್ ಖಾನ್ ಅವರು ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆಯ ಸಂದರ್ಭ ಹೇಳಿದ್ದಾರೆ.

ಬಿಗ್ ಬಾಸ್ 18 ರ ಈ ವಾರದ ಕಾರ್ಯಕ್ರಮದಲ್ಲಿ ಸ್ಪರ್ಧಿಗಳನ್ನು ಉದ್ದೇಶಿಸಿ, ಅವರ ನಡುವಿನ ಜಗಳವನ್ನು ನಿಭಾಯಿಸುವ ಸಂದರ್ಭದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಆತ್ಮೀಯ ಸ್ನೇಹಿತ, ಎನ್‌ಸಿಪಿ ನಾಯಕ ಬಾಬಾ ಸಿದ್ದೀಕ್‌ ಅವರ ಹತ್ಯೆಯ ನಂತರ ಮೊದಲ ಬಾರಿಗೆ ಸಲ್ಮಾನ್ ಖಾನ್ ಸ್ಕ್ರೀನ್ ಮುಂದೆ ಮಾತನಾಡಿದ್ದಾರೆ. ಸಲ್ಮಾನ್ ಅವರು ಸಿದ್ದೀಕ್ ಹತ್ಯೆಯ ಬಳಿಕ ಅವರ ಬಗ್ಗೆ ಯಾವುದೇ ಪೋಸ್ಟ್ ಗಳನ್ನು ಹಂಚಿಕೊಂಡಿರಲಿಲ್ಲ.ಆದರೆ, ಸಿದ್ದೀಕ್ ಅವರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದ್ದರು.

“ನಾವು ಯಾವುದೇ ಪರಿಸ್ಥಿತಿ ಎದುರಿಸುತ್ತಿದ್ದರೂ ಮಾಡಬೇಕಾದ ಕೆಲಸವನ್ನು ಮಾಡಲೇಬೇಕು. ಆ ಕಾರಣಕ್ಕಾಗಿಯೇ ಇಲ್ಲಿಗೆ ಬಂದಿದ್ದೇನೆ. ನನ್ನ ವಿರುದ್ಧವೂ ಆರೋಪ ಮಾಡುತ್ತಾರೆ. ನನ್ನ ಪೋಷಕರಿಗೆ ಇದರಿಂದ ಯಾವ ಸಂದರ್ಭ ಎದುರಿಸಬೇಕಾಗಿ ಬರುತ್ತದೆ ಎಂದು ನನಗೆ ಮಾತ್ರ ಗೊತ್ತು” ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

ಇಫ್ತಾರ್ ಕಾರ್ಯಕ್ರಮಗಳು, ಬಾಲಿವುಡ್ ನಂಟಿಗೆ ಹೆಸರುವಾಸಿಯಾದ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದೀಕ್‌ ಅವರನ್ನು ಅಕ್ಟೋಬರ್ 12 ರಂದು ಅವರ ಶಾಸಕ ಪುತ್ರ ಜೀಶನ್ ಸಿದ್ದೀಕ್‌ ಅವರ ಮುಂಬೈ ಕಚೇರಿಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಇದು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ಕೃತ್ಯ ಎಂದು ಪೊಲೀಸರು ತಿಳಿಸಿದ್ದಾರೆ.

ಸಲ್ಮಾನ್ ಖಾನ್ ಅವರಿಗೆ ಬಿಷ್ಣೋಯ್ ಗ್ಯಾಂಗ್‌ನಿಂದ ಕೊಲೆ ಬೆದರಿಕೆಗಳು ಬಂದಿದ್ದವು. ಕಳೆದ ಏಪ್ರಿಲ್‌ನಲ್ಲಿ ಗ್ಯಾಂಗ್ ಸದಸ್ಯರು ಸಲ್ಮಾನ್ ಅವರ ಬಾಂದ್ರಾದ ಮನೆಯ ಹೊರಗೆ ಗುಂಡು ಹಾರಿಸಿ ಪರಾರಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News