ಮೀಸಲಾತಿಗಳನ್ನು ಸಂಘ ಪರಿವಾರವು ಎಂದಿಗೂ ವಿರೋಧಿಸಿಲ್ಲ : ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್
Update: 2024-04-28 15:19 GMT
ಹೈದರಾಬಾದ್ : ಕೆಲವು ಸಮುದಾಯಗಳಿಗೆ ನೀಡಲಾಗಿರುವ ಮೀಸಲಾತಿಗಳನ್ನು ಸಂಘ ಪರಿವಾರವು ಎಂದಿಗೂ ವಿರೋಧಿಸಿಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ರವಿವಾರ ಇಲ್ಲಿ ಹೇಳಿದರು.
ಶಿಕ್ಷಣ ಸಂಸ್ಥೆಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಅಗತ್ಯವಿರುವವರೆಗೂ ಮೀಸಲಾತಿಗಳನ್ನು ಮುಂದುವರಿಸಬೇಕು ಎನ್ನುವುದು ಸಂಘದ ಅಭಿಪ್ರಾಯವಾಗಿದೆ ಎಂದರು.
ಮೀಸಲಾತಿಗಳ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿರುವ ವ್ಯಾಗ್ಯುದ್ಧದ ನಡುವೆಯೇ ಭಾಗವತ್ ಅವರ ಈ ಹೇಳಿಕೆ ಹೊರಬಿದ್ದಿದೆ.
ಸಮಾಜದಲ್ಲಿ ತಾರತಮ್ಯ ಇರುವವರೆಗೂ ಮೀಸಲಾತಿಗಳು ಮುಂದುವರಿಯಬೇಕು ಎಂದು ಕಳೆದ ವರ್ಷ ನಾಗ್ಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದ ಭಾಗವತ್, ಅಗೋಚರವಾಗಿದ್ದರೂ ತಾರತಮ್ಯ ಸಮಾಜದಲ್ಲಿ ಅಸ್ತಿತ್ವದಲ್ಲಿದೆ ಎಂದಿದ್ದರು.