“ಸಂಶಯದ ವಾತಾವರಣವಿದೆ”: ಅದಾನಿ ಸಂಸ್ಥೆಯ ವಿರುದ್ಧದ ತನಿಖೆ ಪೂರ್ಣಗೊಳಿಸುವಂತೆ ಸೆಬಿಗೆ ಸೂಚಿಸಲು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

Update: 2024-08-13 09:54 GMT

ಹೊಸದಿಲ್ಲಿ: ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್‌ ವಿರುದ್ಧ ಆರೋಪಗಳನ್ನು ಹೊರಿಸಿ ಹಿಂಡೆನ್‌ಬರ್ಗ್‌ ರಿಸರ್ಚ್‌ ಸಂಸ್ಥೆ ಹೊರತಂದಿರುವ ಇತ್ತೀಚಿನ ವರದಿಯ ಹಿನ್ನೆಲೆಯಲ್ಲಿ. ಅದಾನಿ ಸಮೂಹ ಸಂಸ್ಥೆಗಳ ವಿರುದ್ಧದ ಆರೋಪಗಳ ಬಾಕಿ ಇರುವ ತನಿಖೆಯನ್ನು ಪೂರ್ಣಗೊಳಿಸಲು ಸೆಬಿಗೆ ಆದೇಶಿಬೇಕೆಂದು ಕೋರಿ ಈ ಹಿಂದೆ ಸಲ್ಲಿಸಲಾಗಿರುವ ಅರ್ಜಿಯನ್ನು ಸ್ವೀಕರಿಸಬೇಕೆಂದು ಕೋರಿ ಸುಪ್ರೀಂ ಕೋರ್ಟಿಗೆ ಹೊಸ ಅರ್ಜಿ ಸಲ್ಲಿಸಲಾಗಿದೆ. ಇತ್ತೀಚಿನ ಹಿಂಡೆನ್‌ಬರ್ಗ್‌ ವರದಿ ಹೊರಬಿದ್ದ ನಂತರ ಸಂಶಯದ ವಾತಾವರಣವಿರುವುದರಿಂದ ತನಿಖೆ ಪೂರ್ಣಗೊಳಿಸುವ ಅಗತ್ಯವಿದೆ ಎಂದೂ ಅರ್ಜಿದಾರರು ಹೇಳಿದ್ದಾರೆ.

ಹಿಂಡೆನ್‌ಬರ್ಗ್‌ ಸಂಸ್ಥೆ ಈ ಹಿಂದೆ ಜನವರಿ 2023ರಲ್ಲಿ ಅದಾನಿ ಸಂಸ್ಥೆಯ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿ ಹೊರತಂದ ವರದಿಯ ಹಿನ್ನೆಲೆಯಲ್ಲಿ ಎಸ್‌ಐಟಿ/ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಆ ವರ್ಷ ಅರ್ಜಿ ಸಲ್ಲಿಸಿದ್ದ ಹಲವರಲ್ಲಿ ಒಬ್ಬರಾಗಿದ್ದ ವಿಶಾಲ್‌ ತಿವಾರಿ ಇದೀಗ ಮತ್ತೆ ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದಾರೆ.

ಈ ವರ್ಷದ ಜನವರಿಯಲ್ಲಿ ಎಸ್‌ಐಟಿ/ಸಿಬಿಐ ತನಿಖೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿ ಸೆಬಿ ತನಿಖೆಯನ್ನು ಬೆಂಬಲಿಸಿತ್ತು. ಆಗ ತನಿಖೆಯನ್ನು ಆದಷ್ಟು ಬೇಗ, ಮೂರು ತಿಂಗಳೊಳಗೆ ಪೂರ್ಣಗೊಳಿಸುವಂತೆಯೂ ಸೆಬಿಗೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು.

ತನಿಖೆ ಪೂರ್ಣಗೊಳಿಸುವಂತೆ ಸೆಬಿಗೆ ಆದೇಶಿಸಬೇಕೆಂದು ಕೋರಿ ತಿವಾರಿ ಅವರು ಜೂನ್‌ ತಿಂಗಳಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿ ಸ್ವೀಕರಿಸಲು ಸುಪ್ರೀಂ ಕೋರ್ಟಿನ ಜುಡಿಶಿಯಲ್‌ ಲಿಸ್ಟಿಂಗ್‌ ರಿಜಿಸ್ಟ್ರಾರ್‌ ಆಗಸ್ಟ್‌ 5ರಂದು ನಿರಾಕರಿಸಿದ್ದರಲ್ಲದೆ ಸುಪ್ರೀಂ ಕೋರ್ಟ್‌ ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಬೇಕೆಂದು ಖಡಾಖಂಡಿತವಾಗಿ ಹೇಳಿಲ್ಲ ಎಂದಿದ್ದರು.

ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ ರಿಜಿಸ್ಟ್ರಾರ್‌ ಕ್ರಮವನ್ನು ಪ್ರಶ್ನಿಸಿ ತಿವಾರಿ ಈಗ ಮತ್ತೆ ಕೋರ್ಟ್‌ ಕದ ತಟ್ಟಿ ಇತ್ತೀಚಿನ ಹಿಂಡೆನ್‌ಬರ್ಗ್‌ ವರದಿ ಹಿನ್ನೆಲೆಯಲ್ಲಿ “ ಸಂಶಯದ ವಾತಾವರಣವಿರುವುದರಿಂದʼ ಆದಷ್ಟು ಬೇಗ ತನಿಖೆ ಪೂರ್ಣಗೊಳಿಸುವಂತೆ ಆದೇಶಿಸಲು ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News