ಚಂಡೀಗಢದಲ್ಲಿ ಮೂವರು ಆಪ್ ಕೌನ್ಸಿಲರ್‌ಗಳು ಬಿಜೆಪಿಗೆ ಸೇರ್ಪಡೆ: ಆಪ್‌ಗೆ ತೀವ್ರ ಹಿನ್ನಡೆ
ಚಂಡೀಗಢ: ಮೇಯರ್ ಹುದ್ದೆಗೆ ಮರು ಚುನಾವಣೆ ನಡೆಯುವ ಸಾಧ್ಯತೆ ಇರುವ ಬೆನ್ನಿಗೇ ಮೂವರು ಆಪ್ ಕೌನ್ಸಿಲರ್‌ಗಳು ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ಕೇಸರಿ ಪಕ್ಷ ಗಮನಾರ್ಹ ಮೇಲುಗೈ ಸಾಧಿಸಿದಂತಾಗಿದೆ.
ಆಪ್ ಕೌನ್ಸಿಲರ್‌ಗಳಾದ ಪೂನಮ್ ದೇವಿ, ನೇಹಾ ಮುಸಾವತ್ ಹಾಗೂ ಗುರುಚರಣ್ ಕಾಲಾ ಇಂದು ಹೊಸದಿಲ್ಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಚುನಾವಣಾ ಅವ್ಯವಹಾರ ಹಾಗೂ ಅಕ್ರಮಗಳ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನೂತನವಾಗಿ ಚುನಾಯಿತರಾಗಿರುವ ಮೇಯರ್ ಮನೋಜ್ ಸೋಂಕರ್ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ ಬೆನ್ನಿಗೇ ಈ ಬೆಳವಣಿಗೆ ಸಂಭವಿಸಿದೆ.
ತಮ್ಮ ಪಕ್ಷಾಂತರದ ಕುರಿತು ಪ್ರತಿಕ್ರಿಯಿಸಿರುವ ಆಪ್ ಕೌನ್ಸಿಲರ್ ನೇಹಾ ಮುಸಾವತ್, "ನಮಗೆ ಆಪ್ ಸುಳ್ಳು ಭರವಸೆಗಳನ್ನು ನೀಡಿತ್ತು. ಇಂದು ಪ್ರಧಾನಿ ಮೋದಿಯವರ ಕೆಲಸಗಳಿಂದ ಪ್ರೇರಿತಳಾಗಿ ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ" ಎಂದು ಹೇಳಿದ್ದಾರೆ. ನೇಹಾ ಮುಸಾವತ್‌ರ ಮಾತುಗಳನ್ನು ಪುನರುಚ್ಚರಿಸಿದ ಪೂನಮ್ ದೇವಿ, ಆಪ್ ನಕಲಿ ಪಕ್ಷ ಎಂದು ವಾಗ್ದಾಳಿ ನಡೆಸಿದರು.
ಚಂಡೀಗಢ ಮಹಾನಗರ ಪಾಲಿಕೆಗೆ ಹೊಸದಾಗಿ ಚುನಾವಣೆ ನಡೆದಾಗ ತನ್ನದೇ 17 ಕೌನ್ಸಿಲರ್‌ಗಳು, ಅಕಾಲಿ ದಳದ ಓರ್ವ ಕೌನ್ಸಿಲರ್ ಹಾಗೂ ಚಂಡೀಗಢ ಸಂಸದ ಕಿರೊನ್ ಖೇರ್ ಬಲ ಹೊಂದಿರುವ ಬಿಜೆಪಿಯು ಬಹುಮತಕ್ಕೆ ಅಗತ್ಯವಾದ 19 ಸ್ಥಾನಗಳ ಗಡಿಯನ್ನು ಸುಲಭವಾಗಿ ದಾಟುವ ಸಾಧ್ಯತೆ ಇದೆ.