ಮೊದಲ ಬಾರಿ ವಿಶ್ವದ ನಂ.1 ಏಕದಿನ ಬೌಲರ್ ಆಗಿ ಹೊರಹೊಮ್ಮಿದ ಶಾಹೀನ್ ಅಫ್ರಿದಿ
ದುಬೈ: ಪಾಕಿಸ್ತಾನದ ಪ್ರಮುಖ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಬುಧವಾರ ಬಿಡುಗಡೆಯಾದ ಏಕದಿನ ರ್ಯಾಂಕಿಂಗ್‌ನಲ್ಲಿ ನಂ.1 ಬೌಲರ್ ಆಗಿ ಹೊರಹೊಮ್ಮುವ ಮೂಲಕ ಮಹತ್ವದ ಮೈಲಿಗಲ್ಲು ತಲುಪಿದರು. ವೃತ್ತಿಜೀವನದಲ್ಲಿ ಮೊದಲ ಬಾರಿ ಐಸಿಸಿ ಬೌಲರ್‌ಗಳ ರ‍್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ.
ಕ್ರಿಕೆಟ್ ಪಯಣದಲ್ಲಿ ಸಾಕಷ್ಟು ಏರಿಳಿತ ಕಂಡಿರುವ ಶಾಹೀನ್ ಏಳು ಸ್ಥಾನ ಮೇಲಕ್ಕೇರಿ ಆಸ್ಟ್ರೇಲಿಯದ ವೇಗದ ಬೌಲರ್ ಜೋಶ್ ಹೇಝಲ್‌ವುಡ್‌ರನ್ನು ಹಿಂದಿಕ್ಕಿ ನಂ.1 ಸ್ಥಾನ ಪಡೆದರು. ಬಾಂಗ್ಲಾದೇಶ ವಿರುದ್ಧ ಮಂಗಳವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಕೇವಲ 23 ರನ್‌ಗೆ 3 ವಿಕೆಟ್‌ಗಳನ್ನು ಕಬಳಿಸಿದ್ದ ಶಾಹೀನ್ ಇದೀಗ ರ‍್ಯಾಂಕಿಂಗ್ ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಬಾಂಗ್ಲಾದೇಶ ವಿರುದ್ಧ ತನ್ನ 51ನೇ ಪಂದ್ಯದಲ್ಲಿ ಅಫ್ರಿದಿ 100ನೇ ವಿಕೆಟ್ ಪಡೆದಿದ್ದರು. ಏಕದಿನ ಮಾದರಿ ಕ್ರಿಕೆಟ್‌ನಲ್ಲಿ ವೇಗವಾಗಿ 100 ವಿಕೆಟ್ ಪೂರೈಸಿದ ಮೂರನೇ ಆಟಗಾರ ಎನಿಸಿಕೊಂಡಿದ್ದರು. ವೇಗದ ಬೌಲರ್‌ಗಳ ಪೈಕಿ ಕ್ಷಿಪ್ರಗತಿಯಲ್ಲಿ ಈ ಸಾಧನೆ ಮಾಡಿದ್ದಾರೆ.
ಪ್ರಸಕ್ತ ವಿಶ್ವಕಪ್‌ನಲ್ಲಿ ಒಟ್ಟು 16 ವಿಕೆಟ್‌ಗಳನ್ನು ಉರುಳಿಸಿರುವ ಶಾಹೀನ್ ಆಸ್ಟ್ರೇಲಿಯದ ಸ್ಪಿನ್ನರ್ ಆಡಮ್ ಝಾಂಪಾ ಅವರೊಂದಿಗೆ ಗರಿಷ್ಠ ವಿಕೆಟ್ ಸರದಾರರ ಪಟ್ಟಿಯಲ್ಲಿ ಅಗ್ರ ಸ್ಥಾನ ಹಂಚಿಕೊಂಡಿದ್ದಾರೆ.
ಸಿರಾಜ್, ಕುಲದೀಪ್‌ಗೆ ಭಡ್ತಿ: ಇದೇ ವೇಳೆ ಭಾರತದ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಹಾಗೂ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಕ್ರಮವಾಗಿ 3ನೇ ಹಾಗೂ 7ನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.
ಬ್ಯಾಟರ್‌ಗಳ ರ್ಯಾಂಕಿಂಗ್‌ನಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಆಝಮ್ ನಂ.1 ಸ್ಥಾನ ಉಳಿಸಿಕೊಂಡಿದ್ದಾರೆ. ಭಾರತದ ಶುಭಮನ್ ಗಿಲ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕ್ರಮವಾಗಿ 2ನೇ, 5ನೇ ಹಾಗೂ ಏಳನೇ ಸ್ಥಾನದಲ್ಲಿದ್ದಾರೆ.
ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಮೊದಲ ಸ್ಥಾನದಲ್ಲಿದ್ದಾರೆ. ಭಾರತದ ಹಾರ್ದಿಕ್ ಪಾಂಡ್ಯ 11ನೇ ಸ್ಥಾನಕ್ಕೆ ಕುಸಿದಿದ್ದಾರೆ. ರವೀಂದ್ರ ಜಡೇಜ 13ನೇ ಸ್ಥಾನ ಉಳಿಸಿಕೊಂಡಿದ್ದಾರೆ.