‘ಸಂಸತ್‌ನ ಬುನಾದಿಗಳನ್ನು ಕಂಪಿಸುವಂತೆ ಮಾಡುವೆ’ : ಭಾರತಕ್ಕೆ ಪನ್ನೂನ್ ಬೆದರಿಕೆ
ಹೊಸದಿಲ್ಲಿ: 2001ರ ಸಂಸತ್‌ಭವನ ದಾಳಿಯ ವರ್ಷಾಚರಣೆಯ ದಿನವಾದ ಡಿಸೆಂಬರ್ 13ರಂದು ಅಥವಾ ಅದಕ್ಕೆ ಮುನ್ನ ಸಂಸತ್‌ನ ಅಡಿಪಾಯಗಳೇ ಕಂಪಿಸುವಂತಹ ಕೃತ್ಯವೊಂದನ್ನು ಎಸಗುವುದಾಗಿ ಅಮೆರಿಕದಲ್ಲಿ ನೆಲೆಸಿರುವ ಖಾಲಿಸ್ತಾನ್ ಪರ ಉಗ್ರಗಾಮಿ ಗುರುಪತ್ವಂತ್ ಸಿಂಗ್ ಪನ್ನೂನ್ ಭಾರತಕ್ಕೆ ಬೆದರಿಕೆ ಹಾಕಿದ್ದಾನೆ.
ತನ್ನ ಹತ್ಯೆಗೆ ಭಾರತ ನಡೆಸಿದ ವಿಫಲ ಯತ್ನಕ್ಕೆ ತಾನು ನೀಡುವ ಪ್ರತ್ಯುತ್ತರ ಇದಾಗಲಿದೆಯೆಂದು ಆತ ಬುಧವಾರ ವೀಡಿಯೊ ಮೂಲಕ ಪ್ರಸಾರ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾನೆ.
ಅಮೆರಿಕ ಹಾಗೂ ಕೆನಡದ ಅವಳಿ ಪೌರತ್ವವನ್ನು ಹೊಂದಿರುವ ಪನ್ನೂನ್, ಸಂಸತ್‌ಭವನ ದಾಳಿ ಪ್ರಕರಣಕ್ಕೆ ಸಂಬಂಧಿಸಿ 2013ರಲ್ಲಿ ಗಲ್ಲಿಗೇರಿಸಲ್ಪಟ್ಟ ಉಗ್ರ ಅಫ್ಝಲ್ ಗುರುವಿನ ಭಾವಚಿತ್ರವಿರುವ ಪೋಸ್ಟರ್‌ನೊಂದಿಗೆ ತನ್ನ ಫೋಟೋ ಇರುವ ವೀಡಿಯೊವನ್ನು ಬಿಡುಗಡೆಗೊಳಿಸಿದ್ದಾನೆ. ‘ದಿಲ್ಲಿ ಬನೇಗಾ ಖಾಲಿಸ್ತಾನ್’ ಎಂಬ ಚಿತ್ರಬರಹವನ್ನು ಕೂಡಾ ಆತ ಅದರಲ್ಲಿ ಪ್ರಕಟಿಸಿದ್ದಾನೆ.
ತನ್ನ ಹತ್ಯೆಗೆ ಭಾರತೀಯ ಏಜೆನ್ಸಿಗಳು ನಡೆಸಿದ ಸಂಚು ವಿಫಲವಾಗಿದೆ ಎಂದು ಆತ ವೀಡಿಯೊದಲ್ಲಿ ಹೇಳಿಕೊಂಡಿದ್ದಾನೆ. ಡಿಸೆಂಬರ್ 13ರಂದು ಅಥವಾ ಅದಕ್ಕೆ ಮೊದಲು ಸಂಸತ್‌ಭವನದ ಮೇಲೆ ದಾಳಿ ನಡೆಸುವ ಮೂಲಕ ತನ್ನ ಹತ್ಯೆಯ ಸಂಚಿಗೆ ಪ್ರತ್ಯುತ್ತರ ನೀಡುವುದಾಗಿ ಪನ್ನೂನ್ ಬೆದರಿಕೆ ಹಾಕಿದ್ದಾನೆ.
ಸಂಸತ್‌ಭವನದ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ಪನ್ನೂನ್ ಈ ಬೆದರಿಕೆಯೊಡ್ಡಿದ್ದಾನೆ. ಹಾಲಿ ಸಂಸತ್ ಅಧಿವೇಶನವು ಡಿಸೆಂಬರ್ 22ರವರೆಗೆ ನಡೆಯಲಿದೆ.
ಇದಕ್ಕೂ ಮೊದಲು ಪನ್ನೂನ್ ಬಿಡುಗಡೆಗೊಳಿಸಿದ ವೀಡಿಯೊವೊಂದರಲ್ಲಿ ನವೆಂಬರ್ 13ರ ಆನಂತರ ಏರ್ ಇಂಡಿಯಾ ವಿಮಾನದಲ್ಲಿ ಸಿಖ್ಖರು ಪ್ರಯಾಣಿಸಬಾರದೆಂದೂ, ಇಲ್ಲವಾದಲ್ಲಿ ಅವರ ಜೀವಕ್ಕೆ ಅಪಾಯವಾಗಲಿದೆ ಎಂದು ಎಚ್ಚರಿಕೆ ನೀಡಿದ್ದ.
ಸಿಖ್ಖ್ ಪ್ರತ್ಯೇಕತಾವಾದಿ ನಾಯಕನಾದ ಪನ್ನೂನ್ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಯು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ, 1967ರಡಿ ಪ್ರಕರಣ ದಾಖಲಿಸಿದೆ.
ಪನ್ನೂನ್‌ನನ್ನು ಬಾಡಿಗೆ ಹಂತಕರ ಮೂಲಕ ಹತ್ಯೆಗೈಯಲು ಭಾರತ ನಡೆಸಿದ ಸಂಚನ್ನು ಅಮೆರಿಕದ ಅಧಿಕಾರಿಗಳು ವಿಫಲಗೊಳಿಸಿರುವುದಾಗಿ ಅಮೆರಿಕದ ದಿನಪತ್ರಿಕೆಯೊಂದು ವರದಿ ಮಾಡಿತ್ತು.
ಪನ್ನೂನ್‌ನನ್ನು ಹತ್ಯೆಗೈಯಲು ಭಾರತ ಸರಕಾರದ ಅಧಿಕಾರಿಯೊಬ್ಬರು ನಿಖಿಲ್ ಗುಪ್ತಾ ಎಂಬ ಡ್ರಗ್ಸ್ ಕಳ್ಳಸಾಗಣೆದಾರನೊಂದಿಗೆ ಸಂಚುಹೂಡಿದ್ದರು ಎಂದು ಅಮೆರಿಕದ ಫೆಡರಲ್ ಪ್ರಾಸಿಕ್ಯೂಟರ್‌ಗಳು ಆಪಾದಿಸಿದ್ದರು.
ದಿಲ್ಲಿಯಲ್ಲಿ ಕಟ್ಟೆಚ್ಚರ
ಸಂಸತ್‌ಭವನದ ಮೇಲೆ ದಾಳಿ ನಡೆಸುವುದಾಗಿ ಖಾಲಿಸ್ತಾನ್ ಉಗ್ರ ಪನ್ನೂನ್‌ನ ಬೆದರಿಕೆಯೊಡ್ಡಿರುವ ವೀಡಿಯೊ ಜಾಲತಾಣಗಳಲ್ಲಿ ಪ್ರಸಾರವಾದ ಆನಂತರ ರಾಜಧಾನಿ ದಿಲ್ಲಿಯಲ್ಲಿ ಭದ್ರತಾಪಡೆಗಳನ್ನು ಕಟ್ಟೆಚ್ಚರದಲ್ಲಿರಿಸಲಾಗಿದೆ.
ಸಂಸತ್‌ಭವನದಲ್ಲಿ ಕಲಾಪಗಳು ನಡೆಯುತ್ತಿರುವುದರಿಂದ ನಾವು ಕಟ್ಟೆಚ್ಚರವನ್ನು ವಹಿಸಿದ್ದೇವೆ. ಯಾವುದೇ ಅಹಿತಕರ ಘಟನೆ ನಡೆಯುವುದನ್ನು ತಡೆಯಲು ಎಲ್ಲಾ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಿಲ್ಲಿ ಮಹಾನಗರಾದ್ಯಂತ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಭಾರತೀಯ ಭದ್ರತಾ ಏಜೆನ್ಸಿಗಳು ಕೂಡಾ ಕಟ್ಟೆಚ್ಚರದಲ್ಲಿರಿಸಲಾಗಿದೆ. ಭಾರತ ವಿರೋಧಿ ಅಭಿಯಾನವನ್ನು ತೀವ್ರಗೊಳಿಸುವಂತೆಯೂ ಪಾಕಿಸ್ತಾನದ ಬೇಹುಗಾರಿಕಾ ಸಂಘಟನೆ ಐಎಸ್‌ಐ ನಿರ್ದೇಶನಗಳನ್ನು ನೀಡಿದೆಯೆಂದು ಮಾಧ್ಯಮಗಳು ವರದಿ ಮಾಡಿವೆ.