ನನ್ನ ಚಲನವಲನಗಳ ಕುರಿತು ಮಾಹಿತಿ ಕಲೆ ಹಾಕಲು ನನಗೆ Z+ ಭದ್ರತೆ ಒದಗಿಸಿರಬಹುದು ಎಂದ ಶರದ್ ಪವಾರ್

Update: 2024-08-23 16:04 GMT

ಶರದ್ ಪವಾರ್ | PTI

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳು ಹತ್ತಿರದಲ್ಲೇ ಇರುವುದರಿಂದ, ನನ್ನ ಚಲನವಲನಗಳ ಕುರಿತು ನೈಜ ಮಾಹಿತಿಯನ್ನು ಕಲೆ ಹಾಕುವ ಪ್ರಯತ್ನದ ಭಾಗವಾಗಿ ನನಗೆ Z+ ಭದ್ರತೆ ಒದಗಿಸಿರಬಹುದು ಎಂದು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಶಂಕೆ ವ್ಯಕ್ತಪಡಿಸಿದ್ದಾರೆ.

ಬುಧವಾರ ಕೇಂದ್ರ ಸರಕಾರವು ಗಣ್ಯ ವ್ಯಕ್ತಿಗಳಿಗೆ ಒದಗಿಸಲಾಗುವ ಅತ್ಯುನ್ನತ ಸಶಸ್ತ್ರ ಭದ್ರತೆಯಾದ Z+ ಭದ್ರತೆಯನ್ನು ಶರದ್ ಪವಾರ್ ಅವರಿಗೆ ಒದಗಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ತಮ್ಮ ಭದ್ರತೆಯನ್ನು ಉನ್ನತೀಕರಿಸಿರುವ ಕುರಿತು ವರದಿಗಾರರಿಗೆ ಪ್ರತಿಕ್ರಿಯಿಸಿದ ಶರದ್ ಪವಾರ್, ಈ ನಡೆಯ ಹಿಂದಿನ ಕಾರಣವೇನು ಎಂದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

"ಮೂವರು ಅತಿ ಗಣ್ಯ ವ್ಯಕ್ತಿಗಳಿಗೆ Z+ ಭದ್ರತೆಯನ್ನು ಒದಗಿಸಲು ಕೇಂದ್ರ ಸರಕಾರ ನಿರ್ಧರಿಸಿದ್ದು, ಈ ಪೈಕಿ ನಾನೂ ಒಬ್ಬ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ನನಗೆ ಮಾಹಿತಿ ನೀಡಿದರು. ಇನ್ನುಳಿದ ಇಬ್ಬರು ಯಾರು ಎಂದು ನಾನವರನ್ನು ಪ್ರಶ್ನಿಸಿದೆ. ಅದಕ್ಕೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂದು ಅವರು ಹೇಳಿದರು" ಎಂದು ಶರದ್ ಪವಾರ್ ತಿಳಿಸಿದ್ದಾರೆ.

"ಚುನಾವಣೆಗಳು ಸಮೀಪಿಸುತ್ತಿರುವುದರಿಂದ, ನನ್ನ ಚಲನವಲನಗಳನ್ನು ಕುರಿತು ನೈಜ ಮಾಹಿತಿಗಳನ್ನು ಕಲೆ ಹಾಕಲು ಈ ವ್ಯವಸ್ಥೆ ಮಾಡಿರಬಹುದು" ಎಂದು ಅವರು ಶಂಕಿಸಿದ್ದಾರೆ.

ಪವಾರ್ ಅವರಿಗೆ ಒದಗಿಸಲಾಗಿರುವ Z+ ಭದ್ರತೆಯನ್ವಯ, ಅವರಿಗೆ 55 ಮಂದಿ ಸಶಸ್ತ್ರ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿಗಳನ್ನು ಅವರ ಭದ್ರತೆಗೆ ನಿಯೋಜಿಸಲಾಗುತ್ತದೆ. ಅವರಿಗೆ ಜೀವ ಬೆದರಿಕೆ ಇರುವುದನ್ನು ಕೇಂದ್ರೀಯ ಇಲಾಖೆಗಳ ಪರಾಮರ್ಶೆಯ ಸಂದರ್ಭದಲ್ಲಿ ಮೌಲ್ಯಮಾಪನ ಮಾಡಿದ ನಂತರ, ಪವಾರ್ ಅವರಿಗೆ ಬಿಗಿ ಭದ್ರತೆ ಒದಗಿಸಲು ಶಿಫಾರಸು ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News