ಶಿಂಧೆ ಬಣಕ್ಕೆ ಶಿವಸೇನಾ ಹೆಸರು, ಬಿಲ್ಲು ಬಾಣ ಚಿಹ್ನೆ: ಅರ್ಜಿಯ ತುರ್ತು ಆಲಿಕೆಗಾಗಿ ಸುಪ್ರೀಂಕೋರ್ಟ್ ಗೆ ಉದ್ಧವ್ ಮನವಿ

Update: 2023-07-09 17:05 GMT

ಸುಪ್ರೀಂಕೋರ್ಟ್ | Photo: PTI 

ಹೊಸದಿಲ್ಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಬಣಕ್ಕೆ ಶಿವಸೇನಾ ಪಕ್ಷದ ಹೆಸರು ಹಾಗೂ ಬಿಲ್ಲು ಬಾಣ ಚಿಹ್ನೆಯನ್ನು ನೀಡಿರುವ ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿ ತಾನು ಸಲ್ಲಿಸಿರುವ ಅರ್ಜಿಯನ್ನು ತುರ್ತು ಆಲಿಕೆಗಾಗಿ ಪಟ್ಟಿ ಮಾಡುವಂತೆ ಕೋರಿ ಶಿವಸೇನಾ (UBT) ಬಣದ ನಾಯಕ ಉದ್ಧವ್ ಠಾಕ್ರೆ ಅವರು ಸುಪ್ರೀಂಕೋರ್ಟ್ ಗೆ ಮನವಿ ಮಾಡಿದ್ದಾರೆ.

ಪಕ್ಷಾಂತರಕ್ಕಾಗಿ ಶಿಂಧೆ ಬಣದ ಶಾಸಕರನ್ನು ವಿಧಾನಸಭಾ ಸದಸ್ಯತದಿಂದ ಅನರ್ಹಗೊಳಿಸುವ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಮುಂದುವರಿಯುವಂತೆ ಸುಪ್ರೀಂಕೋರ್ಟ್ ನ ಸಾಂವಿಧಾನಿಕ ಪೀಠವು ಮೇ ತಿಂಗಳಲ್ಲಿ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ಅವರಿಗೆ ನಿರ್ದೇಶನ ನೀಡಿತ್ತು ಈ ಹಿನ್ನೆಲೆಯಲ್ಲಿ ಶಿಂಧೆ ಬಣದ ಪರವಾಗಿ ಚುನಾವಣಾ ಆಯೋಗವು ಫೆಬ್ರವರಿ 17ರಂದು ನೀಡಿದ ಆದೇಶವು ಸಂಪೂರ್ಣವಾಗಿ ಆಕ್ರಮವೆಂದು ಸುಪ್ರೀಂಕೋರ್ಟ್ ನ ರಿಜಿಸ್ಟ್ರಾರ್ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯು ಸನ್ನಿಹಿತವಾಗುತ್ತಿದೆ ಹಾಗೂ ಶಿಂಧೆ ಅವರು ಶಿವಸೇನಾ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಅಕ್ರಮವಾಗಿ ಬಳಸಿಕೊಳ್ಳುತ್ತಿದೆಯೆಂದು ಉದ್ಧವ್ ಠಾಕ್ರೆ ಪರ ವಕೀಲ ಅಮಿತ್ ಆನಂದ್ ತಿವಾರಿ ಆರೋಪಿಸಿದ್ದಾರೆ. ಶಾಸಕರ ಅನರ್ಹತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ವಿಧಾನಸಭಾ ಸ್ಪೀಕರ್ ಪರಿಶೀಲಿಸಿದ ಬಳಿಕವಷ್ಟೇ ಚುನಾವಣಾ ಆಯೋಗದ ಆದೇಶವು ಜಾರಿಗೊಳ್ಳುವುದೆಂದು ಸುಪ್ರೀಂಕೋರ್ಟ್ ನ ಸಾಂವಿಧಾನಿಕ ಪೀಠವು ತಿಳಿಸಿತ್ತು.

ಶಾಸಕರ ಅನರ್ಹತೆ ಕೋರಿ ಸಲ್ಲಿಸಲಾದ ಅರ್ಜಿಗಳ ಪರಿಶೀಲನೆಯನ್ನು ಸ್ಪೀಕರ್ ಅವರು ಉದ್ದೇಶಪೂರ್ವಕವಾಗಿ ವಿಳಂಬಿಸುತ್ತಿದ್ದಾರೆಂದು ಆರೋಪಿಸಿ ಠಾಕ್ರೆ ಅವರು ಇತ್ತೀಚೆಗೆ ಸುಪ್ರೀಂಕೋರ್ಟ್ ನಲ್ಲಿ ಪ್ರತ್ಯೇಕ ಅರ್ಜಿಯೊಂದನ್ನು ಸಲ್ಲಿಸಿದ್ದರು.

ಚುನಾವಣಾ ಆಯೋಗದ ವಿರುದ್ದದ ಹೂಡಿರುವ ಪ್ರಕರಣದ ಈ ಹಿಂದಿನ ಆಲಿಕೆಯನ್ನು ಫೆಬ್ರವರಿ 22ರಂದು ನಡೆಸಲಾಗಿತ್ತು ಹಾಗೂ ಆನಂತರ ಮೂರು ವಾರಗಳ ಬಳಿಕ ಅದನ್ನು ವಿಚಾರಣೆ ಪಟ್ಟಿ ಮಾಡುವಂತೆ ನಿರ್ದೇಶನ ನೀಡಿತ್ತು. ಆದಾಗ್ಯೂ, ಈವರೆಗೆ ಅದನ್ನು ಪಟ್ಟಿ ಮಾಡಿಲ್ಲವೆಂದು ಉದ್ಧವ್ ಅವರು ರಿಜಿಸ್ಟ್ರಾರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ತಾನು ಹಾಗೂ ತನ್ನ ಬಣವು ಕೇವಲ ಶಿವಸೇನಾದಿಂದ ವಿಭಜನೆಗೊಂಡಿದೆಯೇ ಹೊರತು ಪಕ್ಷಾಂತರ ಮಾಡಿಲ್ಲವೆಂಬ ಶಿಂಧೆ ಅವರ ವಾದವನ್ನು ಸ್ಪೀಕರ್ ಒಪ್ಪಿಕೊಳ್ಳಲಾಗದೆಂದು ಸುಪ್ರೀಂಕೋರ್ಟ್ ನ ಸಾಂವಿಧಾನಿಕ ಪೀಛವು ಈ ವರ್ಷದ ಮೇ ತಿಂಗಳಲ್ಲಿ ನೀಡಿದ ತೀರ್ಪೊಂದರಲ್ಲಿ ತಿಳಿಸಿತ್ತು. 2003ರಲ್ಲಿ ಸಂವಿಧಾನದ ತಿದ್ದುಪಡಿಯ ಮೂಲಕ 10ನೇ ಶೆಡ್ಯೂಲ್ ಗೆ  ಮಾಡಲಾದ 3ನೇ ಪ್ಯಾರಾವನ್ನು ರದ್ದುಪಡಿಸಿದ್ದು, ಇದರಿಂದಾಗಿ ಶಿಂಧೆ ಬಣವು ತಾನು ಪಕ್ಷದಿಂದ ವಿಭಜನೆಗೊಂಡಿರುವೆನೆಂದು ವಾದಿಸಲು ಸಾಧ್ಯವಾಗದೆಂದು ಸರ್ವೋಚ್ಚ ನ್ಯಾಯಾಲಯ ಹೇಳಿಕೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News