ಶಿವಾಜಿ ಪ್ರತಿಮೆ ಕುಸಿತ, ನೋಟು ನಿಷೇಧ, ಜಿಎಸ್‌ಟಿ ಜಾರಿಗೆ ಪ್ರಧಾನಿ ಕ್ಷಮೆ ಕೋರಬೇಕು: ರಾಹುಲ್ ಗಾಂಧಿ

Update: 2024-09-05 16:22 GMT

ರಾಹುಲ್ ಗಾಂಧಿ |  PC : PTI  

ಸಾಂಗ್ಲಿ (ಮಹಾರಾಷ್ಟ್ರ): ಸಿಂಧುದುರ್ಗಾ ಜಿಲ್ಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಪ್ರತಿಯೋರ್ವರ ಕ್ಷಮೆ ಕೇಳಬೇಕು ಎಂದು ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ.

ಪ್ರತಿಭಟನೆಯ ಬಳಿಕ ಹಿಂಪಡೆಯಲಾದ ರೈತ ವಿರೋಧಿ ಕಾಯ್ದೆ, ತಪ್ಪಾದ ಜಿಎಸ್‌ಟಿ ಜಾರಿಗೆ ತಂದಿರುವುದಕ್ಕೆ, ನಗದು ಅಮಾನ್ಯೀಕರಣಕ್ಕೆ ಕೂಡ ನರೇಂದ್ರ ಮೋದಿ ಅವರು ಕ್ಷಮೆ ಕೋರಬೇಕು ಎಂದು ಅವರು ಹೇಳಿದರು.

‘‘ಪ್ರಧಾನಿ ನರೇಂದ್ರ ಮೋದಿ ಯಾಕೆ ಕ್ಷಮೆ ಕೋರುತ್ತಿದ್ದಾರೆ ಎಂದು ನಾನು ತಿಳಿಯಲು ಬಯಸುತ್ತೇನೆ. ಶಿವಾಜಿ ಪ್ರತಿಮೆಯ ನಿರ್ಮಾಣದ ಗುತ್ತಿಗೆಯನ್ನು ಅರ್ಹತೆ ಇಲ್ಲದ ಆರೆಸ್ಸೆಸ್ ಕಾರ್ಯಕರ್ತನಿಗೆ ನೀಡಿರುವುದಕ್ಕಾಗಿಯೇ ? ಅಥವಾ ಪ್ರಕ್ರಿಯೆಯಲ್ಲಿ ನಡೆದಿರುವ ಭ್ರಷ್ಟಾಚಾರಕ್ಕಾಗಿಯೇ?’’ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.

ಎಲ್ಲಾ ಗುತ್ತಿಗೆಗಳನ್ನು ಅದಾನಿ ಹಾಗೂ ಅಂಬಾನಿಗೆ ಯಾಕೆ ನೀಡಲಾಗುತ್ತದೆ. ಅವರು ಕೇವಲ ಇಬ್ಬರು ವ್ಯಕ್ತಿಗಳಿಂದ ಸರಕಾರ ನಡೆಸುತ್ತಿದ್ದಾರೆ ಯಾಕೆ ? ಎಂದು ಅವರು ಪ್ರಶ್ನಿಸಿದರು. ಇಬ್ಬರ ಉಪಯೋಗಕ್ಕಾಗಿ ಸಣ್ಣ ಹಾಗೂ ಮಧ್ಯಮ ಉದ್ಯಮಗಳನ್ನು ನಾಶ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಇಂದಿನ ರಾಜಕೀಯ ಎರಡು ಸಿದ್ಧಾಂತಗಳ ನಡುವಿನ ಹೋರಾಟ. ನಾವು ಸಾಮಾಜಿಕ ಪ್ರಗತಿಯನ್ನು ಹಾಗೂ ನಮ್ಮೊಂದಿಗೆ ಪ್ರತಿಯೊಬ್ಬರನ್ನು ಕರೆದೊಯ್ಯಲು ಬಯಸುತ್ತೇವೆ. ಆದರೆ, ಬಿಜೆಪಿ ಆಯ್ದ ಕೆಲವರ ಅಭಿವೃದ್ಧಿಯನ್ನು ಮಾತ್ರ ಬಯಸುತ್ತದೆ ಎಂದು ಅವರು ತಿಳಿಸಿದರು.

ಮಹಾರಾಷ್ಟ್ರ ಯಾವತ್ತೂ ಪ್ರಗತಿಪರ ರಾಜ್ಯವಾಗಿದೆ. ಛತ್ರಪತಿ ಶಿವಾಜಿ ಮಹಾರಾಜ, ಛತ್ರಪತಿ ಸಾಹು ಮಹಾರಾಜ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮಾ ಜ್ಯೋತಿರಾವ್ ಪುಲೆ ಪ್ರಗತಿಯ ದಾರಿಯನ್ನು ತೋರಿಸಿಕೊಟ್ಟಿದ್ದಾರೆ. ಅವರು ತೋರಿಸಿದ ದಾರಿಯಲ್ಲಿ ಪ್ರತಿಯೊಬ್ಬರು ಸಾಗುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News