ಶಿವಾಜಿ ಪ್ರತಿಮೆ ಪತನ | ವಾಸ್ತುಶಿಲ್ಪಿಯು ಶರಣಾಗುವ ಉದ್ದೇಶದೊಂದಿಗೆ ಕಲ್ಯಾಣ್ ಗೆ ಬಂದಿದ್ದರು ಎಂದ ಆರೋಪಿ ಪರ ವಕೀಲ
ಮುಂಬೈ : ಛತ್ರಪತಿ ಶಿವಾಜಿ ಮಹಾರಾಜ್ ಪ್ರತಿಮೆ ಪತನದ ಸಂಬಂಧ ಬಂಧಿತರಾಗಿರುವ ವಾಸ್ತುಶಿಲ್ಪಿ ಜಯದೀಪ್ ಆಪ್ಟೆ, ಥಾಣೆ ಜಿಲ್ಲೆಯ ಕಲ್ಯಾಣ್ ನಲ್ಲಿರುವ ತಮ್ಮ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಬಂದಿದ್ದರು ಹಾಗೂ ಪೊಲೀಸರೆದುರು ಶರಣಾಗಲು ಬಯಸಿದ್ದರು ಎಂದು ಅವರ ವಕೀಲರು ಹೇಳಿದ್ದಾರೆ.
ಬುಧವಾರ ರಾತ್ರಿ 24 ವರ್ಷದ ಆಪ್ಟೆಯನ್ನು ಕಲ್ಯಾಣ್ ನಲ್ಲಿರುವ ಅವರ ನಿವಾಸದಿಂದ ಪೊಲೀಸರ ತಂಡವೊಂದು ಬಂಧಿಸಿತ್ತು.
ಮಾಲ್ವನ್ ನಲ್ಲಿರುವ ರಾಜ್ ಕೋಟ್ ಕೋಟೆಯಲ್ಲಿ ಸ್ಥಾಪಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜ್ ಅವರ ಪ್ರತಿಮೆಯು ಆಗಸ್ಟ್ 26ರಂದು ಪತನಗೊಂಡಿದ್ದರಿಂದ, ಅದನ್ನು ನಿರ್ಮಿಸಿದ್ದ ಆಪ್ಟೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಪ್ರತಿಮೆ ನಿರ್ಮಾಣಗೊಂಡ ಒಂಭತ್ತು ತಿಂಗಳಿನಲ್ಲೇ ಪತನವಾಗಿತ್ತು. ಆತನನ್ನು ಪತ್ತೆ ಹಚ್ಚಲು ಪೊಲೀಸರು ಏಳು ತಂಡಗಳನ್ನು ರಚಿಸಿದ್ದರು.
ಬುಧವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಆಪ್ಟೆ ಪರ ವಕೀಲ ಗಣೇಶ್ ಸೊವಾನಿ, ನಿರೀಕ್ಷಣಾ ಜಾಮೀನು ಪಡೆಯುವ ಬದಲು ಪೊಲೀಸರೆದುರು ಶರಣಾಗಿ ಕಾನೂನು ಕ್ರಮ ಎದುರಿಸಲು ಆಪ್ಟೆ ನಿರ್ಧರಿಸಿದ್ದರು. ಈ ನಿರ್ಧಾರವನ್ನು ಬುಧವಾರ ಮಾಡಲಾಯಿತು ಹಾಗೂ ಯೋಜನೆಯಂತೆ ಪೊಲೀಸರೆದುರು ಶರಣಾಗಲು ಕಲ್ಯಾಣ್ ಗೆ ಬಂದಿದ್ದರು ಎಂದು ತಿಳಿಸಿದರು.
“ನಾವು ಆಪ್ಟೆಯ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿದೆವು ಹಾಗೂ ತನಿಖೆಗೆ ಸಹಕರಿಸಲು ಆಪ್ಟೆ ಪೊಲೀಸರೆದುರು ಶರಣಾಗುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದೆವು” ಎಂದು ತಿಳಿಸಿದ ಸೊವಾನಿ, ಆಪ್ಟೆ ಬಚ್ಚಿಟ್ಟುಕೊಂಡಿದ್ದರು ಎಂಬ ಪೊಲೀಸರ ಆರೋಪವನ್ನು ಅವರು ತಳ್ಳಿ ಹಾಕಿದ್ದಾರೆ.
ಮತ್ತೊಂದೆಡೆ, ಆಪ್ಟೆ ತಮ್ಮ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಕಲ್ಯಾಣ್ ಗೆ ಬರುತ್ತಿದ್ದಾರೆ ಎಂಬ ಸುಳಿವನ್ನು ಆಧರಿಸಿ ನಾವು ಆತನನ್ನು ಸೆರೆ ಹಿಡಿದೆವು ಎಂದು ಪೊಲೀಸರು ಪುನರುಚ್ಚರಿಸಿದ್ದಾರೆ.
ಆಪ್ಟೆ ತನ್ನ ಗುರುತನ್ನು ಮರೆ ಮಾಚಲು ಮುಖಕ್ಕೆ ಮುಖಗವಸು ತೊಟ್ಟಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮರಾಠ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜ್ ಅವರ ಪ್ರತಿಮೆಯು ಪತನಗೊಂಡಿದ್ದರಿಂದ ಮಹಾರಾಷ್ಟ್ರದಲ್ಲಿ ಭಾರಿ ವಿವಾದ ಸೃಷ್ಟಿಯಾಗಿದೆ. ಇಷ್ಟರಲ್ಲೇ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ವಿರೋಧ ಪಕ್ಷಗಳು ಈ ವಿಷಯವನ್ನು ಏಕನಾಥ್ ಶಿಂದೆ ನೇತೃತ್ವದ ಸರಕಾರದ ವಿರುದ್ಧ ರಾಜಕೀಯ ಅಸ್ತ್ರವನ್ನಾಗಿಸಿಕೊಂಡಿವೆ.