ಒಣಮೇವಿನ ಕೊರತೆ ದೇಶದಲ್ಲಿ ಹಾಲಿನ ಬೆಲೆ ಏರಿಕೆಗೆ ಕಾರಣವಾಗಬಹುದು: ವರದಿ

Update: 2023-11-29 12:20 GMT

Photo : freepik.com

ಹೊಸದಿಲ್ಲಿ: ದೇಶವು ಗಂಭೀರ ಒಣಮೇವಿನ ಕೊರತೆಯನ್ನು ಎದುರಿಸುತ್ತಿದ್ದು, ಇದು ಹಾಲಿನ ಬೆಲೆ ಏರಿಕೆಗೆ ಕಾರಣವಾಗಬಹುದು ಎಂದು ಭಾರತೀಯ ಹುಲ್ಲುಗಾವಲು ಮತ್ತು ಮೇವು ಸಂಶೋಧನಾ ಸಂಸ್ಥೆ (ಐಜಿಎಫ್ಆರ್ ಐ)ಯ ಇಬ್ಬರು ವಿಜ್ಞಾನಿಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಹೆಚ್ಚಿದ ಜಾನುವಾರುಗಳ ಸಂಖ್ಯೆ,ಕಡಿಮೆಯಾಗಿರುವ ಹುಲ್ಲುಗಾವಲು ಪ್ರದೇಶ,ಕೃಷಿ ತ್ಯಾಜ್ಯಗಳ ಸುಡುವಿಕೆ ಮತ್ತು ಮೇವಾಗಿ ಉಪಯೋಗವಾಗುತ್ತಿದ್ದ ಭತ್ತದ ಒಣಹುಲ್ಲು ಎಥೆನಾಲ್ ಉತ್ಪಾದನೆಗೆ ಬಳಕೆ ಇವು ಮೇವು ಪೂರೈಕೆಯಲ್ಲಿ ಕೊರತೆಗೆ ಕಾರಣವಾಗಿವೆ ಎಂದು ವರದಿಯು ಹೇಳಿದೆ.

ಮೇವು ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಕಳೆದ ಕೆಲವು ವರ್ಷಗಳಲ್ಲಿ ಹಾಲಿನ ಬೆಲೆ ಹೆಚ್ಚುತ್ತಲೇ ಇದೆ. ರವಿವಾರ ಅಖಿಲ ಭಾರತ ಸರಾಸರಿ ಚಿಲ್ಲರೆ ಹಾಲಿನ ಬೆಲೆ ಪ್ರತಿ ಲೀ.ಗೆ 57.52 ರೂ.ಇತ್ತು.ಕಳೆದ ವರ್ಷದ ಇದೇ ಅವಧಿಯಲ್ಲಿ ಅದು 54.90 ರೂ.ಇತ್ತು ಎಂದು ವರದಿಯು ತಿಳಿಸಿದೆ.

ಜಾನುವಾರುಗಳ ನಿರ್ವಹಣೆ ವೆಚ್ಚದಲ್ಲಿ ಮೇವಿನ ಪಾಲು ಶೇ.70ರಷ್ಟಿದೆ, ಹೀಗಾಗಿ ಮೇವಿನ ಅಲಭ್ಯತೆಯು ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತದೆ. ಇತ್ತೀಚಿನ ಅಂದಾಜುಗಳಂತೆ ಹಸಿರು ಮೇವಿನ ಪೂರೈಕೆಯಲ್ಲಿ ಶೇ.11.4 ಮತ್ತು ಒಣಮೇವಿನ ಪೂರೈಕೆಯಲ್ಲಿ ಶೇ.23.1ರಷ್ಟು ಕೊರತೆಯಿದೆ ಎಂದು ವರದಿಯು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News