ಸಿಕ್ಕಿಂ | ಏಕೈಕ ಪ್ರತಿಪಕ್ಷ ಶಾಸಕ ಆಡಳಿತ ಪಕ್ಷಕ್ಕೆ ಸೇರ್ಪಡೆ

Update: 2024-07-11 14:10 GMT

ಪ್ರೇಮಸಿಂಗ್ ತಮಾಂಗ್ , ತೇನ್ಜಿಂಗ್ ನೊರ್ಬು ಲಮ್ಥಾ | PC  : NDTV 

ಗ್ಯಾಂಗ್ಟಕ್: ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್(ಎಸ್‌ಡಿಎಫ್)ನ ಏಕೈಕ ಶಾಸಕ ತೇನ್ಜಿಂಗ್ ನೊರ್ಬು ಲಮ್ಥಾ ಅವರು ಬುಧವಾರ ಆಡಳಿತಾರೂಢ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ)ಕ್ಕೆ ಸೇರ್ಪಡೆಗೊಂಡಿದ್ದಾರೆ. ಇದರೊಂದಿಗೆ 32 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಪ್ರತಿಪಕ್ಷವೇ ಇಲ್ಲದಂತಾಗಿದೆ.

‘ನಾನು ನನ್ನ ಕ್ಷೇತ್ರದ ಮತದಾರರೊಂದಿಗೆ ಸಮಾಲೋಚಿಸಿದ್ದು, ಸಾರ್ವಜನಿಕರ ಒಲವು ಮುಖ್ಯಮಂತ್ರಿ ಪ್ರೇಮಸಿಂಗ್ ತಮಾಂಗ್ ನೇತೃತ್ವದ ಎಸ್‌ಕೆಎಂ ಪರವಾಗಿರುವುದರಿಂದ ಅದಕ್ಕೆ ಸೇರುವಂತೆ ಅವರು ನನಗೆ ಸಲಹೆ ನೀಡಿದ್ದರು’ ಎಂದು ಪಕ್ಷ ಸೇರ್ಪಡೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಲಮ್ಥಾ ತಿಳಿಸಿದರು.

ತಮಾಂಗ್ ನಾಯಕತ್ವವನ್ನು ಪ್ರಶಂಸಿಸಿದ ಲಮ್ಥಾ,ಎಸ್‌ಕೆಎಂ ಸರಕಾರವು ಕಳೆದ ಐದು ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿ ಮತ್ತು ಜನಹಿತಕ್ಕಾಗಿ ಮಹತ್ತರವಾದ ಕೆಲಸವನ್ನು ಮಾಡಿದೆ. ಅದರ ಕಾರ್ಯಕ್ಷಮತೆಯನ್ನು ಮೆಚ್ಚಿ ಆಡಳಿತ ಪಕ್ಷಕ್ಕೆ ಭಾರೀ ಜನಾದೇಶ ಲಭಿಸಿದೆ. ಜನಾದೇಶದಲ್ಲಿ ಪ್ರತಿಫಲಿಸಿರುವಂತೆ ಸಿಕ್ಕಿಂ ವಿಧಾನಸಭೆಯ ಒಳಗೆ ಮತ್ತು ಹೊರಗೆ ಎಸ್‌ಕೆಎಮ್‌ಗೆ ವಿರೋಧದ ಅಗತ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಜನರು ನೀಡಿದ್ದಾರೆ ಎಂದು ಹೇಳಿದರು.

ಲಮ್ಥಾ ಶ್ಯಾರಿ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News