ನಿಧಾನಗತಿಯ ಬೌಲಿಂಗ್: ರಿಷಭ್ ಪಂತ್ ಗೆ 24 ಲಕ್ಷ ರೂ. ದಂಡ

Update: 2024-04-04 15:58 GMT

ರಿಷಭ್ ಪಂತ್ |  Photo: X 

ಹೊಸದಿಲ್ಲಿ : ಕೋಲ್ಕತಾ ನೈಟ್ ರೈಡರ್ಸ್ ವಿರುದ್ದ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಪ್ರಸಕ್ತ ಋತುವಿನಲ್ಲಿ ಎರಡನೇ ಬಾರಿ ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡಿರುವುದಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ.

ವಿಶಾಖಪಟ್ಟಣದಲ್ಲಿ ಕೆಕೆಆರ್ ವಿರುದ್ಧ ಹೀನಾಯವಾಗಿ ಸೋತ ಪಂದ್ಯದಲ್ಲಿ ಡೆಲ್ಲಿ ತಂಡವು ನಿಧಾನಗತಿಯ ಬೌಲಿಂಗ್ ಮಾಡಿತ್ತು.

ಐಪಿಎಲ್ ನೀತಿ ಸಂಹಿತೆಯ ಪ್ರಕಾರ ಡೆಲ್ಲಿ ಕ್ಯಾಪಿಟಲ್ಸ್ ತಂಡ ಎರಡನೇ ಬಾರಿ ನಿಧಾನಗತಿಯ ಬೌಲಿಂಗ್ ಮಾಡಿದ ತಪ್ಪಿಗೆ ತಂಡದ ನಾಯಕ ಪಂತ್ ಭಾರೀ ಮೊತ್ತವನ್ನು ದಂಡವಾಗಿ ಪಾವತಿಸಬೇಕಾಗಿದೆ. ಇಂಪ್ಯಾಕ್ಟ್ ಪ್ಲೇಯರ್ ಸಹಿತ ಆಡುವ 11ರ ಬಳಗದ ಉಳಿದ ಆಟಗಾರರು 6 ಲಕ್ಷ ರೂ. ಅಥವಾ ತಮ್ಮ ಪಂದ್ಯಶುಲ್ಕದಲ್ಲಿ ಶೇ.25ರಷ್ಟು ಮೊತ್ತವನ್ನು ದಂಡದ ರೂಪದಲ್ಲಿ ತೆರಬೇಕಾಗಿದೆ ಎಂದು ಐಪಿಎಲ್ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಕೆಕೆಆರ್ ತಂಡ ಐಪಿಎಲ್ ಇತಿಹಾಸದಲ್ಲಿ ಎರಡನೇ ಗರಿಷ್ಠ ಮೊತ್ತ (272/7)ಗಳಿಸಿತ್ತು. ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಪವರ್ ಪ್ಲೇ ವೇಳೆ ತನ್ನ ಪವರ್ ಕಳೆದುಕೊಂಡಿತು. ಪಂತ್(55 ರನ್) ಹಾಗೂ ಟ್ರಿಸ್ಟಾನ್ ಸ್ಟರ್ಬ್ಸ್(54 ರನ್)ಒಂದಷ್ಟು ಹೋರಾಟವನ್ನು ನೀಡಿದ್ದರೂ ಅಂತಿಮವಾಗಿ ಡೆಲ್ಲಿ ತಂಡ 106 ರನ್ ಅಂತರದಿಂದ ಸೋಲನುಭವಿಸಿತು.

ಟೂರ್ನಮೆಂಟ್ನಲ್ಲಿ ಈ ತನಕ ಆಡಿರುವ ಎಲ್ಲ 3 ಪಂದ್ಯಗಳನ್ನು ಜಯಿಸಿ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿರುವ ಕೆಕೆಆರ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News