ಥಳಿಸಲು ನಿಮಗೆ ಅಧಿಕಾರವಿದೆ ಎಂದು ನೀವು ಹೇಗೆ ಭಾವಿಸಿದ್ದೀರಿ?: ಆರೋಪಿಗಳನ್ನು ಸಾರ್ವಜನಿಕವಾಗಿ ಥಳಿಸಿದ್ದ ಗುಜರಾತ್‌ ಪೊಲೀಸರಿಗೆ ಸುಪ್ರೀಂ ಪ್ರಶ್ನೆ

Update: 2024-01-24 11:34 GMT

ಹೊಸದಿಲ್ಲಿ: ಗುಜರಾತಿನಲ್ಲಿ ಆರೋಪಿಗಳನ್ನು ಸಾರ್ವಜನಿಕವಾಗಿ ಥಳಿಸಿದ್ದಕ್ಕಾಗಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಪೋಲಿಸರ ವಿರುದ್ಧದ ನ್ಯಾಯಾಂಗ ನಿಂದನೆ ಕಲಾಪಗಳಿಗೆ ಮಂಗಳವಾರ ತಡೆಯಾಜ್ಞೆ ನೀಡಿದ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು, ಅವರ ಕ್ರಮಗಳನ್ನು ಕಟುವಾಗಿ ಟೀಕಿಸಿತು. ಆರೋಪಿಗಳನ್ನು ಸಾರ್ವಜನಿಕವಾಗಿ ಥಳಿಸಲು ಕಾನೂನಿನಡಿ ನಿಮಗೆ ಅಧಿಕಾರವಿದೆ ಎಂದು ನೀವು ಹೇಗೆ ಭಾವಿಸಿದ್ದೀರಿ ಎಂದು ಪ್ರಶ್ನಿಸಿತು.

2022,ಅ.3ರಂದು ಗುಜರಾತಿನ ಖೇಡಾ ಜಿಲ್ಲೆಯ ಉಂಧೇಲಾ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಗರ್ಬಾ ಕಾರ್ಯಕ್ರಮಕ್ಕೆ ಕೆಲವರು ಅಡ್ಡಿಯನ್ನುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. 40ಕ್ಕೂ ಅಧಿಕ ಮುಸ್ಲಿಮ್ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡಿದ್ದ ಪೋಲಿಸರು ಅವರ ಪೈಕಿ ಐವರನ್ನು ಗ್ರಾಮದ ಚೌಕದಲ್ಲಿಯ ಕಂಬಗಳಿಗೆ ಕಟ್ಟಿ ಹಾಕಿ ಥಳಿಸಿದ್ದರು ಮತ್ತು ಈ ವೇಳೆ ಅಲ್ಲಿ ಸೇರಿದ್ದ ಗುಂಪು ಹರ್ಷೋದ್ಗಾರ ಮಾಡುತ್ತಿತ್ತು. ಎ.ವಿ.ಪರಮಾರ್,ಡಿ,ಬಿ.ಕುಮಾವತ್,ಎಲ್.ಕೆ.ದಾಭಿ ಮತ್ತು ರಾಜು ಭಾಯಿ ದಾಭಿ ಈ ನಾಲ್ವರು ಪೋಲಿಸರಾಗಿದ್ದರು. ಪೋಲಿಸರ ದೌರ್ಜನ್ಯದ ವೀಡಿಯೊ ತುಣುಕುಗಳು ವೈರಲ್ ಆಗಿದ್ದವು.

ವಿಷಯವು ನ್ಯಾಯಾಲಯದ ಮೆಟ್ಟಿಲೇರಿದಾಗ ಡಿ.ಕೆ.ಬಸು ವಿರುದ್ಧ ಪಶ್ಚಿಮ ಬಂಗಾಳ ರಾಜ್ಯ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ತಪ್ಪಿತಸ್ಥ ಪೋಲಿಸ್ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆಗಾಗಿ ಆರೋಪಗಳನ್ನು ರೂಪಿಸಲಾಗಿತ್ತು. ಆರೋಪಿಗಳನ್ನು ಬಂಧಿಸುವಾಗ ಅಥವಾ ವಶಕ್ಕೆ ತೆಗೆದುಕೊಳ್ಳುವಾಗ ಪೋಲಿಸರ ನಡವಳಿಕೆಯ ಬಗ್ಗೆ ಈ ಪ್ರಕರಣವು ನಿಯಮಗಳನ್ನು ರೂಪಿಸಿತ್ತು.

ಕಳೆದ ವರ್ಷ ಗುಜರಾತ್ ಉಚ್ಚ ನ್ಯಾಯಾಲಯವು ನಾಲ್ವರು ಪೋಲಿಸರಿಗೆ 14 ದಿನಗಳ ಜೈಲುಶಿಕ್ಷೆಯನ್ನು ವಿಧಿಸಿತ್ತಾದರೂ,ತೀರ್ಪನ್ನು ಪ್ರಶ್ನಿಸಲು ಅವರಿಗೆ ಅವಕಾಶ ನೀಡಲು ಶಿಕ್ಷೆ ಜಾರಿಯನ್ನು ಮೂರು ತಿಂಗಳು ಮುಂದೂಡಲು ಒಪ್ಪಿಕೊಂಡಿತ್ತು.

ಪೋಲಿಸ್ ಅಧಿಕಾರಿಗಳು ಸಲ್ಲಿಸಿದ್ದ ಶಾಸನಬದ್ಧ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸಂದೀಪ ಮೆಹ್ತಾ ಅವರ ಸರ್ವೋಚ್ಚ ನ್ಯಾಯಾಲಯದ ಪೀಠವು ಮಂಗಳವಾರ ಅಂಗೀಕರಿಸಿತಾದರೂ ಅವರನ್ನು ಅದು ತೀವ್ರ ತರಾಟೆಗೆತ್ತಿಕೊಂಡಿತು.

ಜನರನ್ನು ಕಂಬಗಳಿಗೆ ಕಟ್ಟಿ ಸಾರ್ವಜನಿಕವಾಗಿ ಥಳಿಸಿದ ದೌರ್ಜನ್ಯದ ಬಳಿಕವೂ ನೀವು ಈ ನ್ಯಾಯಾಲಯದಿಂದ ಪರಿಹಾರ ನಿರೀಕ್ಷಿಸಿದ್ದೀರಿ ಎಂದು ನ್ಯಾ.ಮೆಹ್ತಾ ಕಟುವಾಗಿ ಹೇಳಿದರು.

ತನ್ನ ಕಕ್ಷಿದಾರರು ಈಗಾಗಲೇ ಕ್ರಿಮಿನಲ್ ಮೊಕದ್ದಮೆ,ಇಲಾಖಾ ಪ್ರಕ್ರಿಯೆಗಳು ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಹೀಗಿರುವಾಗ ಈಗ ತಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವು ಅವರಿಗೆ ಹೊರೆಯಾಗುತ್ತದೆ ಎಂದು ಪೋಲಿಸರ ಪರ ಹಿರಿಯ ನ್ಯಾಯವಾದಿ ಸಿದ್ಧಾರ್ಥ ದವೆ ಹೇಳಿದಾಗ,’ಅಂದರೆ ನಿಮ್ಮ ಕಕ್ಷಿದಾರರಿಗೆ ಕಾನೂನಿನ ಅಡಿ ಅಧಿಕಾರವಿದೆ? ಜನರನ್ನು ಕಂಬಕ್ಕೆ ಕಟ್ಟಿ ಹಾಕಲು ಮತ್ತು ಥಳಿಸಲು?’ ಎಂದು ನ್ಯಾ.ಗವಾಯಿ ಪ್ರಶ್ನಿಸಿದರು.‘ ಮತ್ತು ವೀಡಿಯೊಗಳನ್ನೂ ಚಿತ್ರೀಕರಿಸಲು? ಎಂದು ನ್ಯಾ.ಮೆಹ್ತಾ ಕೇಳಿದರು.

ಇದು ಉದ್ದೇಶಪೂರ್ವಕ ಉಲ್ಲಂಘನೆಯಾಗಿರಲಿಲ್ಲ ಎಂದು ದವೆ ಪ್ರತಿಪಾದಿಸಿದಾಗ,‘ಹಾಗಾದರೆ ಕಾನೂನಿನ ಅಜ್ಞಾನವು ಸಮರ್ಥನೆಯ ಮಾರ್ಗವೇ? ಡಿ.ಕೆ ಬಸು ಪ್ರಕರಣದಲ್ಲಿ ರೂಪಿಸಲಾಗಿರುವ ಕಾನೂನನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬ ಪೋಲಿಸ್ ಅಧಿಕಾರಿಯ ಕರ್ತವ್ಯವಾಗಿದೆ. ನಾವು ಕಾನೂನು ವಿದ್ಯಾರ್ಥಿಗಳಾಗಿದ್ದಾಗಿನಿಂದಲೇ ಡಿ.ಕೆ.ಬಸು ಪ್ರಕರಣದ ಬಗ್ಗೆ ಕೇಳುತ್ತಲೇ ಬಂದಿದ್ದೇವೆ ’ ಎಂದು ನ್ಯಾ.ಗವಾಯಿ ಹೇಳಿದರು.

ವಿಚಾರಣೆಯ ಆರಂಭಿಕ ಹಂತದಲ್ಲಿ ನ್ಯಾ.ಗವಾಯಿ ‘ಕಸ್ಟಡಿಯನ್ನು ಆನಂದಿಸಿ. ನೀವು ನಿಮ್ಮದೇ ಅಧಿಕಾರಿಗಳ ಅತಿಥಿಗಳಾಗಲಿದ್ದೀರಿ,ಅವರು ನಿಮ್ಮನ್ನು ವಿಶೇಷವಾಗಿ ನೋಡಿಕೊಳ್ಳುತ್ತಾರೆ ’ ಎಂದು ಚಟಾಕಿಯನ್ನು ಹಾರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News