ಆರ್ ಟಿ ಐ ದುರ್ಬಲಗೊಳಿಸುತ್ತಿರುವ ತಿದ್ದುಪಡಿ ವಿರುದ್ಧ ಸಾಮಾಜಿಕ ಹೋರಾಟಗಾರರಿಂದ ರ‍್ಯಾಲಿ
ಹೊಸದಿಲ್ಲಿ: ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ)ಯನ್ನು ದುರ್ಬಲಗೊಳಿಸುವ ತಿದ್ದುಪಡಿ ವಿರುದ್ಧ ನಾಗರಿಕ ಸಮಾಜ ಗುಂಪುಗಳು ಹಾಗೂ ವಕೀಲರು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಸೇರಿದಂತೆ ಸಂಬಂಧಿತ ವ್ಯಕ್ತಿಗಳು ಅಭಿಯಾನ ಆರಂಭಿಸಿದ್ದಾರೆ.
ಈ ತಿದ್ದುಪಡಿಯನ್ನು ನೂತನ ದತ್ತಾಂಶ ಸಂರಕ್ಷಣೆ ಕಾನೂನಿನ ಮೂಲಕ ಪರೋಕ್ಷವಾಗಿ ಪರಿಚಯಿಸಲಾಗಿದ್ದು, ಇದು ವೈಯುಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುವುದರ ಮೇಲೆ ಸಂಪೂರ್ಣ ನಿಷೇಧ ವಿಧಿಸುತ್ತದೆ.
ಡಿಜಿಟಲ್ ವೈಯುಕ್ತಿಕ ದತ್ತಾಂಶ ಸಂರಕ್ಷಣೆ (ಡಿಪಿಡಿಪಿ) ಕಾಯ್ದೆಯ ಸೆಕ್ಷನ್ 44 (3)ರ ಮೂಲಕ ಮಾಹಿತಿ ಹಕ್ಕು ಕಾಯ್ದೆಗೆ ಮಾಡಲಾದ ತಿದ್ದುಪಡಿಯನ್ನು ಕೂಡಲೇ ಹಿಂಪಡೆಯುವಂತೆ ಸಾಮಾಜಿಕ ಹೋರಾಟಗಾರರು ಆಗ್ರಹಿಸಿದ್ದಾರೆ.
ಪ್ರಕಟಣೆಗಾಗಿ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆಯುವುದು ಹಾಗೂ ಸಂಗ್ರಹಿಸುವುದರಿಂದ ಪತ್ರಕರ್ತರನ್ನು ಕೂಡ ಈ ಈ ತಿದ್ದುಪಡಿ ನಿರ್ಬಂಧಿಸುತ್ತದೆ. ಇದು ದೇಶದಲ್ಲಿ ಪಾರದರ್ಶಕ ಆಂದೋಲನಕ್ಕೆ ಮರಣ ಶಾಸನ ಎಂದು ತಜ್ಞರ ತಿಳಿಸಿದ್ದಾರೆ.
‘‘ಈ ತಿದ್ದುಪಡಿ ವೈಯುಕ್ತಿಕ ದತ್ತಾಂಶಕ್ಕೆ ಸಾರಾಸಗಟು ನಿರ್ಬಂಧ ವಿಧಿಸುತ್ತದೆ. ಇಂತಹ ಮಾಹಿತಿಯನ್ನು ಪಡೆಯಲು ವಿಧಿಸಲಾಗುವ ನಿರ್ಬಂಧವು ಪಾರದರ್ಶಕತೆಯನ್ನು ದುರ್ಬಲಗೊಳಿಸುತ್ತದೆ. ಆಡಳಿತದ ಉತ್ತದಾಯಕತ್ವವನ್ನು ಎತ್ತಿ ಹಿಡಿಯುವ ಸಾರ್ವಜನಿಕರ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಆಡಳಿತದ ಮೇಲೆ ಪರಿಣಾಮ ಬೀರುವ ಸಂಕೀರ್ಣ ಸರಕಾರಿ ದಾಖಲೆಗಳ ಲಭ್ಯತೆಯನ್ನು ನಿರ್ಬಂಧಿಸುತ್ತದೆ’’ ಎಂದು ಪೀಪಲ್ಸ್ ಆರ್ಗನೈಷೇಶನ್ ದಿ ನ್ಯಾಷನಲ್ ಕಾಂಪೇನ್ ಫಾರ್ ಪೀಪಲ್ಸ್ ರೈಟ್ ಟು ಇನ್ಫಾರ್ಮೇಶನ್ (ಎನ್ಸಿಪಿಆರ್ಐ) ಹಾಗೂ ಸತಾರ್ಕ್ ನಾಗರಿಕ ಸಂಘಟನೆ (ಎಸ್ಎನ್ಎಸ್)ಗೆ ಸಂಬಂಧಿಸಿದ ಹಿರಿಯ ಸಾಮಾಜಿಕ ಹೋರಾಟಗಾರ್ತಿ ಅಂಜಲಿ ಭಾರದ್ವಾಜ್ ತಿಳಿಸಿದ್ದಾರೆ.