ಸೊಲ್ಲಾಪುರ | ಪೊಲೀಸರ ಮಧ್ಯಪ್ರವೇಶದ ಬಳಿಕ ಮತಪತ್ರಗಳ ಮರುಮತದಾನ ಯೋಜನೆ ರದ್ದು
ಸೋಲಾಪುರ: ಮತಪತ್ರಗಳ ಮೂಲಕ ಮರು ಮತದಾನ ನಡೆಸಲು ಮುಂದಾಗಿದ್ದ ಮಹಾರಾಷ್ಟ್ರದ ಮಲ್ಷಿರಾಸ್ ವಿಧಾನಸಭಾ ಕ್ಷೇತ್ರದ ಗ್ರಾಮಸ್ಥರ ಗುಂಪೊಂದು, ಪೊಲೀಸರ ಮಧ್ಯಪ್ರವೇಶದ ನಂತರ ತನ್ನ ಪಟ್ಟನ್ನು ಸಡಿಲಿಸಿದ್ದು, ಮರು ಮತದಾನ ಯೋಜನೆಯನ್ನು ಕೈಬಿಟ್ಟಿದೆ ಎಂದು ಮಲ್ಷಿರಾಸ್ ವಿಧಾನಸಭಾ ಕ್ಷೇತ್ರದ ಎನ್ಸಿಪಿಯ ವಿಜೇತ ಅಭ್ಯರ್ಥಿ ತಿಳಿಸಿದ್ದಾರೆ.
ಒಂದು ವೇಳೆ ಮರು ಮತದಾನ ಯೋಜನೆಯೊಂದಿಗೆ ಮುಂದುವರಿದರೆ, ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಗ್ರಾಮಸ್ಥರಿಗೆ ಎಚ್ಚರಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಡಿಸೆಂಬರ್ 3ರಂದು ಮರು ಮತದಾನ ನಡೆಸಲಾಗುವುದು ಎಂದು ಸೋಲಾಪುರ ಜಿಲ್ಲೆಯ ಮಲ್ಷಿರಾಸ್ ವಿಧಾನಸಭಾ ಕ್ಷೇತ್ರದ ಮರ್ಕಡ್ವಾಡಿ ಗ್ರಾಮಸ್ಥರು ಬ್ಯಾನರ್ ಹಾಕಿದ್ದರು.
ಈ ಗ್ರಾಮವು ಮಲ್ಷಿರಾಸ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ್ದು, ಈ ಕ್ಷೇತ್ರದಿಂದ ಎನ್ಸಿಪಿ(ಎಸ್ಪಿ) ಅಭ್ಯರ್ಥಿ ಉತ್ತಮ್ ಜಂಕಾರ್ ಅವರು ಬಿಜೆಪಿಯ ರಾಮ್ ಸಾತ್ಪುತೆಯನ್ನು 13,147 ಮತಗಳ ಅಂತರದಲ್ಲಿ ಪರಾಭವಗೊಳಿಸಿದ್ದರು.
ಈ ಕ್ಷೇತ್ರದಿಂದ ಜಂಕಾರ್ ಗೆಲುವು ಸಾಧಿಸಿದರೂ, ತಮ್ಮ ಗ್ರಾಮದಲ್ಲಿ ಜಂಕಾರ್ ವಿರುದ್ಧ ಸಾತ್ಪುತೆ ಹೆಚ್ಚು ಮತ ಗಳಿಸಲು ಸಾಧ್ಯವೇ ಇಲ್ಲ ಎಂದು ವಾದಿಸಿದ್ದ ಮರ್ಕಡ್ವಾಡಿ ಗ್ರಾಮಸ್ಥರು, ವಿದ್ಯುನ್ಮಾನ ಮತ ಯಂತ್ರಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ, ವಿದ್ಯುನ್ಮಾನ ಮತ ಯಂತ್ರಗಳ ಬಗೆಗಿನ ತಮ್ಮ ಸಂಶಯವನ್ನು ನಿವಾರಿಸಿಕೊಳ್ಳಲು ಮರ್ಕಡ್ವಾಡಿ ಗ್ರಾಮಸ್ಥರು ಮತ ಪತ್ರಗಳ ಮೂಲಕ ಡಿಸೆಂಬರ್ 3ರಂದು ಮರು ಮತದಾನ ನಡೆಸಲು ಮುಂದಾಗಿದ್ದರು.