ನ್ಯಾಯಾಧೀಶ ಹುದ್ದೆಗೇರಿದ ಬೀದಿಬದಿ ಆಹಾರ ಮಾರಾಟಗಾರನ ಪುತ್ರ
Son of a street food vendor who became a judge
ಲಕ್ನೊ: ಉತ್ತರ ಪ್ರದೇಶದ ಬೀದಿಬದಿ ವ್ಯಾಪಾರಿಯ ಪುತ್ರರೊಬ್ಬರು ತಮ್ಮ ಅದ್ವಿತೀಯ ಸಾಧನೆಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗಿದ್ದಾರೆ. ವಾಯುವ್ಯ ಉತ್ತರ ಪ್ರದೇಶದ ಸಂಭಾಲ್ ನಲ್ಲಿ ಬೀದಿಬದಿ ಮಳಿಗೆ ಹೊಂದಿರುವ ಹಲೀಮ್ ಅವರ ಪುತ್ರರಾದ ಮೊಹಮ್ಮದ್ ಕಾಸಿಮ್, ಉತ್ತರ ಪ್ರದೇಶ ಪ್ರಾಂತೀಯ ನಾಗರಿಕ ಸೇವೆ-ನ್ಯಾಯಾಂಗ(ಪಿಸಿಎಸ್-ಜೆ) ಪರೀಕ್ಷೆಯಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.
ಆಗಸ್ಟ್ 30ರಂದು ಪ್ರಕಟಗೊಂಡಿರುವ ಫಲಿತಾಂಶದಲ್ಲಿ ಕಾಸಿಮ್ 135ನೇ ರ್ಯಾಂಕ್ ನಲ್ಲಿ ತೇರ್ಗಡೆಯಾಗಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸಿ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಅಭಿನಂದನಾ ಸಂದೇಶಗಳ ಮಹಾಪೂರವೇ ಹರಿದು ಬಂದಿದೆ. ಈ ಪೈಕಿ ಈಗಾಗಲೇ ನ್ಯಾಯಾಂಗ ಸೇವೆಯಲ್ಲಿರುವ ಕೆಲವು ಮಿತ್ರರು, ಕಾಸಿಮ್ ಗೆ ಸ್ವಾಗತ ಕೋರಿದ್ದಾರೆ ಎಂದು ndtv.com ವರದಿ ಮಾಡಿದೆ.
“ಉತ್ತರ ಪ್ರದೇಶ ನ್ಯಾಯಾಧೀಶರ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ನ್ಯಾಯಾಧೀಶರಾಗುತ್ತಿರುವುದಕ್ಕೆ ನನ್ನ ಹಿರಿಯ, ನನ್ನ ಗುರು ಹಾಗೂ ಗೆಳೆಯ ಮೊಹಮ್ಮದ್ ಕಾಸಿಮ್ ಭಾಯ್ ಅವರಿಗೆ ಅಭಿನಂದನೆಗಳು. ನಿಮ್ಮ ಕಠಿಣ ಪರಿಶ‍್ರಮ ಫಲ ನೀಡಿದೆ ಹಾಗೂ ನಿಮ್ಮ ಸಾಧನೆಯ ಬಗ್ಗೆ ನನಗೆ ನಿಜಕ್ಕೂ ಹೆಮ್ಮೆಯಾಗುತ್ತಿದೆ.
ಪೀಠದ ಹೊಸ ಪಾತ್ರದಲ್ಲಿ ನಿಮಗೆ ಒಳಿತಾಗಲಿ” ಎಂದು ವಕೀಲ ಎಸ್.ಜಿ.ರಬ್ಬಾನಿ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ummid.com ಪ್ರಕಾರ, ಕಾಸಿಮ್ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ತಮ್ಮ ಬಿಎ, ಎಲ್ಎಲ್‍ಬಿಯನ್ನು ಪೂರೈಸಿದ್ದಾರೆ.
ನಂತರ ಅವರು ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಎಲ್ಎಲ್ಎಂ ಪೂರೈಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಸಿಮ್, ತಮ್ಮ ಸಾಧನೆಯ ಯಶಸ್ಸನ್ನು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಶಿಕ್ಷಕರಿಗೆ ಸಲ್ಲಿಸಿದ್ದಾರೆ. “ನನ್ನ ಹಿಂದಿನ ಪ್ರೇರಕ ಶಕ್ತಿ ನನ್ನ ತಾಯಿಯಾಗಿದ್ದರು. ಅವರು ನಾನು ಶಾಲೆ ತೊರೆಯಲು ಎಂದೂ ಅವಕಾಶ ನೀಡಲಿಲ್ಲ” ಎಂದು ಅವರು ಸ್ಮರಿಸಿಕೊಂಡಿದ್ದಾರೆ.