ಮುಂದುವರಿದ ಸೋನಮ್ ವಾಂಗ್ಚುಕ್ ಉಪವಾಸ
ಹೊಸದಿಲ್ಲಿ: ಹವಾಮಾನ ಹೋರಾಟಗಾರ ಸೋನಮ್ ವಾಂಗ್ಚುಕ್ ತಮ್ಮ ಬೆಂಬಲಿಗರೊಂದಿಗೆ 15ನೇ ದಿನವಾದ ರವಿವಾರವೂ ಉಪವಾಸವನ್ನು ಮುಂದುವರಿಸಿದ್ದು, ಸೋನಮ್ ವಾಂಗ್ಚುಕ್ ಅವರೊಂದಿಗೆ 'ಮೌನ ವೃತ'ದಲ್ಲಿ ಭಾಗವಹಿಸಲು ಬಯಸಿದ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ಸೋನಮ್ ವಾಂಗ್ಚುಕ್ ಅನಿರ್ದಿಷ್ಟಾವಧಿ ಉಪವಾಸ ಕುಳಿತಿರುವ ದಿಲ್ಲಿಯ ಲಡಾಖ್ ಭವನದ ಸುತ್ತಲೂ ಬ್ಯಾರಿಕೇಡ್ಗಳನ್ನು ಹಾಕಲಾಗಿತ್ತು.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಸೋನಮ್ ವಾಂಗ್ಚುಕ್, ಇದು ಮೌನ ವೃತ ಹೊರತು ಪ್ರತಿಭಟನೆಯಲ್ಲ ಎಂದು ಹೇಳಿದ್ದರು. ಹಿಮಾಲಯ ಮತ್ತು ಪರಿಸರವನ್ನು ಉಳಿಸುವ 'ಮೌನ ವೃತದಲ್ಲಿ ರವಿವಾರ ಲಡಾಖ್ ಭವನದಲ್ಲಿ ತನ್ನೊಂದಿಗೆ ಸೇರಿಕೊಳ್ಳುವಂತೆ ವಾಂಗ್ಚುಕ್ ದಿಲ್ಲಿಯ ಜನರನ್ನು ಒತ್ತಾಯಿಸಿದ್ದರು.
ತಮ್ಮ ಬೇಡಿಕೆಗಳ ಈಡೇರಿಕೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿ ಉನ್ನತ ನಾಯಕರ ಜೊತೆ ಸಭೆಗೆ ಒತ್ತಾಯಿಸಿ ಲಡಾಖ್ ನ ಸುಮಾರು 25 ಮಂದಿ ಅ. 6ರಿಂದ ದಿಲ್ಲಿಯ ಲಡಾಖ್ ಭವನದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಲಡಾಖ್ ಅನ್ನು ಸಂವಿಧಾನದ 6ನೇ ಶೆಡ್ಯೂಲ್ ಗೆ ಸೇರಿಸಬೇಕೆಂದು ಒತ್ತಾಯಿಸಿ ವಾಂಗ್ಚುಕ್ ತಮ್ಮ ಬೆಂಬಲಿಗರೊಂದಿಗೆ ಲೇಹ್ ನಿಂದ ದಿಲ್ಲಿಗೆ ಮೆರವಣಿಗೆ ನಡೆಸಿದ್ದರು.