ಉಪಗ್ರಹ ಸೇವೆಗಳಿಗಾಗಿ ಸ್ಪೆಕ್ಟ್ರಂ ಹರಾಜು ತಾಂತ್ರಿಕವಾಗಿ ಕಾರ್ಯಸಾಧ್ಯವಲ್ಲ: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂದಿಯಾ

Update: 2024-12-17 12:13 GMT

ಜ್ಯೋತಿರಾದಿತ್ಯ ಸಿಂದಿಯಾ | PC : PTI

ಹೊಸದಿಲ್ಲಿ: ತಾಂತ್ರಿಕ ಮತ್ತು ಕಾರ್ಯಾಚರಣೆ ಕಾರಣಗಳಿಂದಾಗಿ ಉಪಗ್ರಹ ಸ್ಪೆಕ್ಟ್ರಂ ಅಥವಾ ತರಂಗಾಂತರವನ್ನು ಹರಾಜು ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಹೇಳಿದ್ದಾರೆ.

ಮೋದಿ ಸರಕಾರವು ಉಪಗ್ರಹ ಆಧಾರಿತ ಸಂವಹನ ಸೇವೆಗಳಿಗಾಗಿ ಸ್ಪೆಕ್ಟ್ರಮ್‌ನ ಆಡಳಿತಾತ್ಮಕ ಹಂಚಿಕೆಗೆ ಒಲವು ತೋರಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಆರೋಪಿಸಿದ ಬಳಿಕ ಸಿಂದಿಯಾರ ಈ ಹೇಳಿಕೆ ಹೊರಬಿದ್ದಿದೆ.

ಅಸ್ತಿತ್ವದಲ್ಲಿರುವ ಕೆಲವು ದೂರಸಂಪರ್ಕ ಕಂಪನಿಗಳೂ ತಮಗೆ ಸಮಾನ ಸ್ಪರ್ಧೆಯ ಅವಕಾಶವನ್ನು ಒದಗಿಸುವುದಿಲ್ಲ ಎಂಬ ಕಾರಣದಿಂದ ಉಪಗ್ರಹ ಆಧಾರಿತ ಸೇವೆಗಳಿಗಾಗಿ ಸ್ಪೆಕ್ಟ್ರಮ್‌ನ ಆಡಳಿತಾತ್ಮಕ ಹಂಚಿಕೆಯನ್ನು ವಿರೋಧಿಸಿವೆ.

ದೂರಸಂಪರ್ಕ ಸೇವೆಗಳಿಗಾಗಿ ಸ್ಪೆಕ್ಟ್ರಮ್‌ನ್ನು ಹರಾಜುಗಳ ಮೂಲಕ ಹಂಚಿಕೆ ಮಾಡಲಾಗುತ್ತಿತ್ತು.

ಹಲವು ವಿಭಾಗಗಳಿಂದ ಹರಾಜು ಮೂಲಕ ಹಂಚಿಕೆಗೆ ಬೇಡಿಕೆಯಿದ್ದರೂ ಮೋದಿ ಸರಕಾರವು ಸ್ಪೆಕ್ಟ್ರಮ್‌ನ ಆಡಳಿತಾತ್ಮಕ ಹಂಚಿಕೆಗೆ ನಿರ್ಧರಿಸಿದೆ ಎನ್ನುವುದನ್ನು ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಲಭಿಸಿರುವ ಉತ್ತರವು ದೃಢಪಡಿಸಿದೆ ಎಂದು ರಮೇಶ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಹೇಳಿದ್ದರು.

ಆರೋಪಗಳಿಗೆ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಉತ್ತರಿಸಿರುವ ಸಿಂದಿಯಾ ಭೂಮಿಯ ಮೇಲಿರುವ ಮತ್ತು ಇರದ ನೆಟ್‌ವರ್ಕ್‌ಗಳ ನಡುವಿನ ಮೂಲಭೂತ ವ್ಯತ್ಯಾಸವನ್ನು ವಿವರಿಸಿದ್ದಾರೆ.

ಭೂಮಿಯ ಮೇಲಿನ ನೆಟ್‌ವರ್ಕ್‌ಗಳಿಗಾಗಿ ಸ್ಪೆಕ್ಟ್ರಂ ಅತ್ಯಂತ ಕಡಿಮೆ ಆವರ್ತನಗಳಲ್ಲಿ ಕಾರ್ಯಾಚರಿಸುತ್ತದೆ ಮತ್ತು ಅದನ್ನು ಒಂದೇ ಘಟಕಕ್ಕೆ ಹಂಚಿಕೆ ಮಾಡಲು ಅವಕಾಶವನ್ನು ನೀಡುತ್ತದೆ ಎಂದು ಬೆಟ್ಟು ಮಾಡಿರುವ ಸಿಂದಿಯಾ,ಇಂಜಿನಿಯರಿಂಗ್ ಮತ್ತು ಭೌತಶಾಸ್ತ್ರದ ದೃಷ್ಟಿಕೋನದಿಂದ ಈ ಸ್ಪೆಕ್ಟ್ರಮ್‌ನ್ನು ಹರಾಜು ಮಾಡಬಹುದು,ಏಕೆಂದರೆ ಒಮ್ಮೆ ಅದನ್ನು ಒಂದು ನಿರ್ದಿಷ್ಟ ಘಟಕಕ್ಕೆ ನಿಯೋಜಿಸಿದರೆ ಬೇರೆ ಯಾರೂ ಆ ಆವರ್ತನವನ್ನು ಬಳಸಲು ಸಾಧ್ಯವಿಲ್ಲ. ಆದಾಗ್ಯೂ ಮಧ್ಯಮ ಭೂ ಕಕ್ಷೆ ಮತ್ತು ಕೆಳ ಭೂ ಕಕ್ಷೆಗಳಲ್ಲಿ ಉಪಗ್ರಹ ತರಗಾಂತರಗಳು ಭಿನ್ನವಾಗಿ ಕಾರ್ಯ ನಿರ್ವಹಿಸುತ್ತವೆ ಎಂದು ತಿಳಿಸಿದ್ದಾರೆ.

ಉಪಗ್ರಹ ಸ್ಪೆಕ್ಟ್ರಂ ಹೆಚ್ಚಿನ ಎತ್ತರಗಳು ಮತ್ತು ಆವರ್ತನಗಳಲ್ಲಿ ಕಾರ್ಯ ನಿರ್ವಹಿಸುತ್ತದೆ,‌ ತನ್ಮೂಲಕ ಅದನ್ನು ಅಂತರ್ಗತವಾಗಿ ಹಂಚಿಕೊಳ್ಳಬಹುದಾಗಿದೆ. ಈ ಸ್ಪೆಕ್ಟ್ರಮ್‌ನ್ನು ಒಬ್ಬ ವ್ಯಕ್ತಿಗೆ ಅಥವಾ ಘಟಕಕ್ಕೆ ಹಂಚಿಕೆ ಮಾಡಲಾಗುವುದಿಲ್ಲ, ಅದು ತನ್ನದೇ ಸ್ವಭಾವದಿಂದ ಹಂಚಿಕೊಳ್ಳಲ್ಪಡುತ್ತದೆ ಎಂದು ಸಚಿವರು ಹೇಳಿದ್ದಾರೆ.

ಈ ವ್ಯತ್ಯಾಸವನ್ನು 2023ರ ನೂತನ ದೂರಸಂಪರ್ಕ ಕಾಯ್ದೆಯ ಶೆಡ್ಯೂಲ್ 1ರಲ್ಲಿ ಕೋಡಿಫೈ ಮಾಡಲಾಗಿದೆ ಎಂದು ಎತ್ತಿ ತೋರಿಸಿದ ಸಿಂದಿಯಾ, ಕ್ಯು-ಬ್ಯಾಂಡ್(ಸುಮಾರು 14 ಗಿಗಾಹರ್ಟ್ಜ್) ಮತ್ತು ಕಾ-ಬ್ಯಾಂಡ್ (27.1ರಿಂದ 31 ಗಿಗಾಹರ್ಟ್ಜ್)ಗಳಲ್ಲಿ ಉಪಗ್ರಹ ಸ್ಪೆಕ್ಟ್ರಮ್‌ನ್ನು ಅಂತರ್ಗತವಾಗಿ ಹಂಚಿಕೊಳ್ಳಬಹುದು, ಇದರಿಂದಾಗಿ ಹರಾಜುಗಳು ಕಾರ್ಯಸಾಧ್ಯವಲ್ಲ ಮತ್ತು ಅನಪೇಕ್ಷಿತವಾಗಿವೆ ಎಂದಿದ್ದಾರೆ.

ಉಪಗ್ರಹ ಸ್ಪೆಕ್ಟ್ರಂ ಹೆಚ್ಚು ಬಳಕೆಯಾಗದೆ ಉಳಿದುಕೊಂಡಿದ್ದು, ಇದನ್ನು ಹಂಚಿಕೆ ಮಾಡುವಲ್ಲಿ ವೈಫಲ್ಯವು ಗಮನಾರ್ಹ ಅನಾನುಕೂಲಗಳಿಗೆ ಕಾರಣವಾಗಬಹುದು ಎಂದೂ ಬೆಟ್ಟು ಮಾಡಿರುವ ಸಿಂದಿಯಾ,ಸರಕಾರಕ್ಕೆ ಸಂಭವನೀಯ ಆದಾಯ ನಷ್ಟ ಹಾಗೂ ಡಿಜಿಟಲ್ ಬಿರುಕನ್ನು ಕಡಿಮೆ ಮಾಡಲು ತಂತ್ರಜ್ಞಾನ ಬಳಕೆಯ ಅವಕಾಶಗಳು ಕೈತಪ್ಪುವುದು ಇವುಗಳಲ್ಲಿ ಸೇರಿವೆ ಎಂದಿದ್ದಾರೆ.

ಪ್ರಸ್ತುತ ಜಗತ್ತಿನ ಯಾವುದೇ ದೇಶವು ಉಪಗ್ರಹ ಸ್ಪೆಕ್ಟ್ರಮ್‌ನ್ನು ಹರಾಜು ಮಾಡುತ್ತಿಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ.

ಕಾಂಗ್ರೆಸ್ ಟೀಕೆಗೆ ಪ್ರತಿಕ್ರಿಯಿಸಿರುವ ಸಿಂದಿಯಾ,ಪ್ರತಿಪಕ್ಷವು ಈ ವಿಷಯವನ್ನು ರಾಜಕೀಯಗೊಳಿಸುತ್ತಿದೆ. ಯುಪಿಎ ಅವಧಿಯಲ್ಲಿ ಅಪಾರದರ್ಶಕವಾದ ಮೊದಲು ಬಂದವರಿಗೆ ಮೊದಲು ಅವಕಾಶ ನೀತಿಯ ಮೂಲಕ ಸ್ಪೆಕ್ಟ್ರಂ ಹಂಚಿಕೆ ಮಾಡಲಾಗಿತ್ತು,ಇದು ಹಗರಣಗಳು ಮತ್ತು ಆರ್ಥಿಕ ನಷ್ಟಗಳಿಗೆ ಕಾರಣವಾಗಿತ್ತು ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News