ಮಹಾ ಕುಂಭಮೇಳದ ಕುರಿತು ಸುಳ್ಳು ಸುದ್ದಿ ಪ್ರಸಾರ ಆರೋಪ | ಸಾಮಾಜಿಕ ಮಾಧ್ಯಮ ಬಳಕೆದಾರರ ವಿರುದ್ಧ ಎಫ್‌ಐಆರ್ ದಾಖಲು

Update: 2025-02-03 21:21 IST
ಮಹಾ ಕುಂಭಮೇಳದ ಕುರಿತು ಸುಳ್ಳು ಸುದ್ದಿ ಪ್ರಸಾರ ಆರೋಪ | ಸಾಮಾಜಿಕ ಮಾಧ್ಯಮ ಬಳಕೆದಾರರ ವಿರುದ್ಧ ಎಫ್‌ಐಆರ್ ದಾಖಲು
  • whatsapp icon

ಲಕ್ನೊ : ಮಹಾಕುಂಭ ಮೇಳದ ಕುರಿತು ವದಂತಿ ಹಾಗೂ ಸುಳ್ಳು ಸುದ್ದಿ ಹರಡಿದ ಆರೋಪದಲ್ಲಿ 7 ಮಂದಿ ಸಾಮಾಜಿಕ ಮಾಧ್ಯಮ ಖಾತೆದಾರರು/ಬಳಕೆದಾರರ ವಿರುದ್ಧ ಮೇಲಾ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)ಯ ವಿವಿಧ ಸೆಕ್ಷನ್ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ (ಐಟಿ) ಅಡಿಯಲ್ಲಿ ಸೋಮವಾರ ಎಫ್‌ಐಆರ್ ದಾಖಲಿಸಿದ್ದಾರೆ.

ವದಂತಿ ಹಾಗೂ ಸುಳ್ಳು ಸುದ್ದಿ ಹರಡಿದ ಆರೋಪದಲ್ಲಿ 7 ಮಂದಿ ಸಾಮಾಜಿಕ ಮಾಧ್ಯಮ ಖಾತೆದಾರರು/ಬಳಕೆದಾರರ ವಿರುದ್ಧ ಮೇಲಾ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಸ್‌ಎಸ್‌ಪಿ (ಕುಂಭಮೇಳ) ರಾಜೇಶ್ ದ್ವಿವೇದಿ ದೃಢಪಡಿಸಿದ್ದಾರೆ.

ಪ್ರಕರಣದ ತನಿಖೆ ಹಾಗೂ ಸೂಕ್ತ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ಸೈಬರ್ ಕ್ರೈಮ್ ಹಾಗೂ ಮೇಲಾ ಪೊಲೀಸರ ಜಂಟಿ ತಂಡಕ್ಕೆ ವಹಿಸಿ ಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಅಪ್‌ಲೋಡ್ ಮಾಡಲಾದ ದಾರಿ ತಪ್ಪಿಸುವ ವೀಡಿಯೊವೊಂದರಲ್ಲಿ ಓರ್ವ ಖಾತೆದಾರ ಕುಟುಂಬದ ಸದಸ್ಯರು ಮೂರು ಮೃತದೇಹಗಳನ್ನು ತಮ್ಮ ಹೆಗಲಲ್ಲಿ ಹೊತ್ತುಕೊಂಡು ಹೋಗುತ್ತಿದ್ದಾರೆ ಎಂದು ಪ್ರತಿಪಾದಿಸುವ ನಕಲಿ ವೀಡಿಯೊ ಪೋಸ್ಟ್ ಮಾಡಿದ್ದಾರೆ ಎಂದು ರಾಜೇಶ್ ದ್ವಿವೇದಿ ಹೇಳಿದ್ದಾರೆ.

ಕಿಡ್ನಿ ಹೊರ ತೆಗೆದ ಬಳಿಕ ಅಪರಿಚಿತ ವ್ಯಕ್ತಿಗಳು ಮೃತದೇಹವನ್ನು ನದಿಗೆ ಎಸೆದಿದ್ದಾರೆ ಎಂದು ತೋರಿಸುವ ವೀಡಿಯೊವೊಂದನ್ನು ಇನ್ನೋರ್ವ ಸಾಮಾಜಿಕ ಮಾಧ್ಯಮ ಖಾತೆದಾರ ಅಪ್‌ಲೋಡ್ ಮಾಡಿದ್ದಾರೆ ಎಂದು ಮೇಲಾ ಪೊಲೀಸರು ಹೇಳಿದ್ದಾರೆ.

ಈ ಸಾಮಾಜಿಕ ಮಾಧ್ಯಮ ಖಾತೆದಾರರ ಗುರುತು ಪತ್ತೆ ಹಚ್ಚಲು ಹಾಗೂ ಕುಂಭಮೇಳಕ್ಕೆ ಅಪಖ್ಯಾತಿ ತರುವ ಹಿಂದಿನ ಅವರ ಉದ್ದೇಶದ ಕುರಿತು ಜಂಟಿ ತಂಡ ತನಿಖೆ ನಡೆಸುತ್ತಿದೆ ಎಂದು ರಾಜೇಶ್ ದ್ವಿವೇದಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News