ಎನ್ಎಂಸಿ ಅಧಿಸೂಚನೆ ಗೆ ಸ್ಟಾಲಿನ್ ವಿರೋಧ

Update: 2023-10-04 15:40 GMT

ಎಂ.ಕೆ. ಸ್ಟಾಲಿನ್ | Photo: PTI 

ಹೊಸದಿಲ್ಲಿ : ರಾಜ್ಯಗಳಲ್ಲಿ ನೂತನ ವೈದ್ಯಕೀಯ ಕಾಲೇಜುಗಳ ಸ್ಥಾಪನೆಯನ್ನು ನಿರ್ಬಂಧಿಸುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ)ವು ಜಾರಿಗೊಳಿಸಿದ ಅಧಿಸೂಚನೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತೀವ್ರವಾಗಿ ವಿರೋಧಿಸಿದ್ದಾರೆ. ಈ ಅಧಿಸೂಚನೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸುವಂತೆ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಸೂಚನೆ ನೀಡಬೇಕೆಂದು ಕೋರಿ ಆವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

‘‘ ರಾಜ್ಯ ಮಟ್ಟದಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ 100 ಎಂಬಿಬಿಎಸ್ ಸೀಟುಗಳನ್ನು ಸೀಮಿತಗೊಳಿಸುವ ಶರತ್ತನ್ನು ವಿಧಿಸಿರುವುದು ಎಲ್ಲಾ ರಾಜ್ಯ ಸರಕಾರಗಳ ಹಕ್ಕುಗಳ ಮೇಲೆ ನಡೆಸಿದ ನೇರ ಅತಿಕ್ರಮಣವಾಗಿದೆ ಹಾಗೂ ಹಲವಾರು ವರ್ಷಗಳಿಂದ ಸಾರ್ವಜನಿಕ ಆರೋಗ್ಯದ ಮೇಲೆ ಹೆಚ್ಚು ಹಣವನ್ನು ಹೂಡಿಕೆ ಮಾಡಿದ ರಾಜ್ಯಗಳಿಗೆ ವಿಧಿಸಿದ ದಂಡವಾಗಿದೆ’’ ಎಂದು ಸ್ಟಾಲಿನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯ ಮಟ್ಟದಲ್ಲಿ ಸಮರ್ಪಕ ಸಂಖ್ಯೆಯ ವೈದ್ಯರಿದ್ದರೂ, ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ವೈದ್ಯರುಗಳ ಕೊರತೆಯು ಈಗಲೂ ಜ್ವಲಂತ ಸಮಸ್ಯೆಯಾಗಿದೆ. ಹಿಂದುಳಿದಪ್ರದೇಶಗಳಲ್ಲಿ ನೂತನ ವೈದ್ಯಕೀಯ ಕಾಲೇಜುಗಳನ್ನು ತೆರೆಯುವ ಮೂಲಕ ಈ ಸಮಸ್ಯೆಗೆ ಪರಿಹಾರವನ್ನ ಕಂಡುಕೊಳ್ಳಬಹುದಾಗಿದೆ ಎಂದವರು ಪತ್ರದಲ್ಲಿ ಹೇಳಿದ್ದಾರೆ.

ರಾಜ್ಯ ಸರಕಾರ ಹಾಗೂ ಖಾಸಗಿ ಸಂಸ್ಥೆಗಳು ಮಾಡಿರುವ ಸ್ಥಿರವಾದ ಹೂಡಿಕೆಗಳಿಂದಾಗಿ ಅಧಿಕಮಟ್ಟದ ವೈದ್ಯ- ಜನಸಂಖ್ಯೆಯ ಅನುಪಾತವನ್ನು ಸಾಧಿಸಲು ತಮಿಳುನಾಡಿಗೆ ಸಾಧ್ಯವಾಯಿತು ಎಂದವರು ಹೇಳಿದ್ದಾರೆ.

ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಅಧಿಕ ಅನುದಾನ ನೀಡುವಂತೆ ರಾಜ್ಯವು ಸತತವಾಗಿ ಕೇಂದ್ರ ಸರಕಾರವನ್ನು ಆಗ್ರಹಿಸುತ್ತಲೇ ಬಂದಿದೆ. ಆದರೆ ಮದುರೈನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯಂತಹ ಯೋಜನೆಗಳು ಇನ್ನಷ್ಟೇ ಕಾರ್ಯಗತಗೊಳ್ಳಬೇಕಾಗಿದೆ. ಈ ರೀತಿಯ ನೂತನ ನಿರ್ಬಂಧಗಳನ್ನು ಹೇರಿಕೆಯು ಭವಿಷ್ಯದಲ್ಲಿ ಕೇಂದ್ರ ಸರಕಾರವು ಆರೋಗ್ಯ ಪಾಲನಾ ವಲಯದಲ್ಲಿ ಯಾವುದೇ ರೀತಿಯ ಹೂಡಿಕೆಗಳನ್ನು ಮಾಡುವುದರಿಂದ ತಮಿಳುನಾಡನ್ನು ವಂಚಿತವಾಗಿಸುತ್ತದೆ’’ ಎಂದು ಸ್ಟಾಲಿನ್ ಗಮನಸೆಳೆದಿದ್ದಾರೆ.

ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ರಾಜ್ಯಗಳಿಗಿರುವ ಮೂಲಭೂತ ಹಕ್ಕುಗಳ ಮೇಲೆ ಯೋಗ್ಯವಾದ ನಿರ್ಬಂಧಗಳನ್ನು ವಿಧಿಸುವಂತಹ ಕಾರ್ಯಾಂಗ ಸೂಚನೆಗಳನ್ನು ವಿಧಿಸಲು ಸಾಧ್ಯವಿಲ್ಲವೆಂದು ಸುಪ್ರೀಂಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಎನ್ಎಂಸಿಯ ನೂತನ ಅಧಿಸೂಚನೆಯು ಕಾನೂನಾತ್ಮಕವಾಗಿ ಸಿಂಧುವಲ್ಲವೆಂದು ಸ್ಟಾಲಿನ್ ಪತ್ರದಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News