ಪ್ರಧಾನಿ ನರೇಂದ್ರ ಮೋದಿಯ ಶೈಕ್ಷಣಿಕ ಅರ್ಹತೆಯ ಬಗ್ಗೆ ಹೇಳಿಕೆ | ಸಂಜಯ್ ಸಿಂಗ್ ವಿರುದ್ಧದ ಸಮನ್ಸ್ ರದ್ದುಪಡಿಸಲು ಸುಪ್ರೀಂ ಕೋರ್ಟ್ ನಕಾರ
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿಯ ಶೈಕ್ಷಣಿಕ ಅರ್ಹತೆಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷ (ಆಪ್)ದ ನಾಯಕ ಸಂಜಯ್ ಸಿಂಗ್‌ಗೆ ನೀಡಲಾಗಿರುವ ಸಮನ್ಸ್‌ಗಳನ್ನು ರದ್ದುಪಡಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಗುಜರಾತ್ ವಿಶ್ವವಿದ್ಯಾನಿಲಯವು ಸಲ್ಲಿಸಿದ ಮಾನನಷ್ಟ ಮೊಕದ್ದಮೆಯ ಆಧಾರದಲ್ಲಿ, ಗುಜರಾತ್‌ನ ನ್ಯಾಯಾಲಯವೊಂದು ಸಂಜಯ್ ಸಿಂಗ್ ವಿರುದ್ಧ ಸಮನ್ಸ್‌ಗಳನ್ನು ಹೊರಡಿಸಿತ್ತು. ತನಗೆ ನೀಡಲಾಗಿರುವ ಸಮನ್ಸ್‌ಗಳನ್ನು ಅವರು ಗುಜರಾತ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಆದರೆ, ಸಮನ್ಸ್‌ಗಳನ್ನು ರದ್ದುಪಡಿಸಲು ಗುಜರಾತ್ ಹೈಕೋರ್ಟ್ ನಿರಾಕರಿಸಿತ್ತು. ಸಿಂಗ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಸೋಮವಾರ, ‘‘ಈ ಅರ್ಜಿಯನ್ನು ನಾವು ಪುರಸ್ಕರಿಸುವುದಿಲ್ಲ’’ ಎಂದು ನ್ಯಾಯಮೂರ್ತಿಗಳಾದ ಬಿ. ಆರ್. ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವೊಂದು ಹೇಳಿತು.
2016ರಲ್ಲಿ, ಪ್ರಧಾನಿ ನರೇಂದ್ರ ಮೋದಿಯ ಶೈಕ್ಷಣಿಕ ಅರ್ಹತೆಯ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಯಡಿಯಲ್ಲಿ ಒದಗಿಸುವಂತೆ ಮುಖ್ಯ ಮಾಹಿತಿ ಕಮಿಶನರ್ ಗುಜರಾತ್ ವಿಶ್ವವಿದ್ಯಾನಿಲಯಕ್ಕೆ ಆದೇಶ ನೀಡಿದ್ದರು. ಆದರೆ, ಆ ಆದೇಶವನ್ನು ಬಳಿಕ ಗುಜರಾತ್ ಹೈಕೋರ್ಟ್ ರದ್ದುಪಡಿಸಿತ್ತು. ಈ ಹಿನ್ನೆಲೆಯಲ್ಲಿ, ಆಡಿದ್ದಾರೆನ್ನಲಾದ ಮಾತುಗಳಿಗಾಗಿ ಗುಜರಾತ್ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಪಿಯೂಶ್ ಪಟೇಲ್ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಆಪ್ ನಾಯಕ ಸಂಜಯ್ ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಜನವರಿಯಲ್ಲಿ, ಕೇಜ್ರಿವಾಲ್ ಮತ್ತು ಸಂಜಯ್ ಸಿಂಗ್ ವಿರುದ್ಧದ ವಿಚಾರಣಾ ನ್ಯಾಯಾಲಯವೊಂದರಲ್ಲಿ ನಡೆಯುತ್ತಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಗುಜರಾತ್‌ನ ವಿಚಾರಣಾ ನ್ಯಾಯಾಲಯವೊಂದರಲ್ಲಿ ನಡೆಯುತ್ತಿರುವ ಮೊಕದ್ದಮೆಯ ವಿಚಾರಣೆಯನ್ನು ರಾಜ್ಯದಿಂದ ಹೊರಗೆ, ಸಾಧ್ಯವಾದರೆ ಕೋಲ್ಕತಕ್ಕೆ ವರ್ಗಾಯಿಸಬೇಕು ಎಂದು ಕೋರಿ ಸಂಜಯ್ ಸಿಂಗ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಆ ಆದೇಶ ನೀಡಿತ್ತು.
ಅದೇ ವೇಳೆ, ವಿಚಾರಣಾ ನ್ಯಾಯಾಲಯವೊಂದು ತಮ್ಮ ವಿರುದ್ಧ ಹೊರಡಿಸಿರುವ ಸಮನ್ಸ್‌ಗಳನ್ನು ರದ್ದುಪಡಿಸಬೇಕೆಂದು ಕೋರುವ ಆಪ್ ನಾಯಕರ ಅರ್ಜಿಯನ್ನು ನಾಲ್ಕು ವಾರಗಳಲ್ಲಿ ಇತ್ಯರ್ಥಪಡಿಸುವಂತೆ ಸುಪ್ರೀಂ ಕೋರ್ಟ್ ಗುಜರಾತ್ ಹೈಕೋರ್ಟ್‌ಗೆ ಸೂಚಿಸಿತ್ತು. ಹೈಕೋರ್ಟ್ ಫೆಬ್ರವರಿ 16ರಂದು ಸಿಂಗ್ ಮತ್ತು ಕೇಜ್ರಿವಾಲ್ ರ ಅರ್ಜಿಗಳನ್ನು ತಿರಸ್ಕರಿಸಿತ್ತು.
ಮೋದಿಯ ಶೈಕ್ಷಣಿಕ ಪದವಿಗಳಿಗೆ ಸಂಬಂಧಿಸಿ ‘‘ವ್ಯಂಗ್ಯ’’ ಮತ್ತು ‘‘ಮಾನಹಾನಿಕರ’’ ಹೇಳಿಕೆಗಳನ್ನು ನೀಡಿರುವರೆನ್ನಲಾದ ಕೇಜ್ರಿವಾಲ್ ಮತ್ತು ಸಿಂಗ್ ವಿರುದ್ಧ ಗುಜರಾತ್ ಮೆಟ್ರೋಪಾಲಿಟನ್ ನ್ಯಾಯಾಲಯವು ಸಮನ್ಸ್‌ಗಳನ್ನು ಹೊರಡಿಸಿತ್ತು.