"ಸರಕಾರ ಬದಲಾದ ನಂತರ ಕಠಿಣ ಕ್ರಮ ಕೈಗೊಳ್ಳಲಾಗುವುದು": 1700 ಕೋಟಿ ರೂ. ಐಟಿ ನೋಟಿಸ್ ಸ್ವೀಕರಿಸಿದ ಬಳಿಕ ತನಿಖಾ ಸಂಸ್ಥೆಗಳಿಗೆ ರಾಹುಲ್ ಗಾಂಧಿ ಎಚ್ಚರಿಕೆ
ಹೊಸದಿಲ್ಲಿ: ಕೇಂದ್ರ ತನಿಖಾ ದಳ ಹಾಗೂ ಜಾರಿ ನಿರ್ದೇಶನಾಲಯದಂಥ ತನಿಖಾ ಸಂಸ್ಥೆಗಳು ಕೇಂದ್ರದಲ್ಲಿರುವ ಬಿಜೆಪಿ ಸರಕಾರದ ಆಜ್ಞೆಗನುಗುಣವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಶುಕ್ರವಾರ ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸರಕಾರ ಬದಲಾವಣೆಯಾದ ನಂತರ ಇಂತಹ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
“ಒಂದು ವೇಳೆ ಈ ಸಂಸ್ಥೆಗಳೇನಾದರೂ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದರೆ ಅದರಿಂದ ಯಾವುದೇ ತೊಂದರೆಯಿಲ್ಲ. ಕೆಲ ದಿನಗಳ ನಂತರ ಬಿಜೆಪಿ ಸರಕಾರ ಬದಲಾಗಲಿದೆ ಹಾಗೂ ಅದಾದ ನಂತರ ಕ್ರಮ ಜರುಗಲಿದೆ ಎಂಬ ಕುರಿತು ಈ ಸಂಸ್ಥೆಗಳು ಯೋಚಿಸಬೇಕು. ಇಂತಹ ಕ್ರಮ ಎಷ್ಟು ಪ್ರಬಲವಾಗಿರುತ್ತದೆಂದರೆ, ಇಂತಹ ಕೃತ್ಯಗಳನ್ನು ಮಾಡಲು ಯಾವುದೇ ಸಂಸ್ಥೆ ಧೈರ್ಯ ತೋರಬಾರದು” ಎಂದು ಅವರು ಎಚ್ಚರಿಸಿದ್ದಾರೆ.
ಆದಾಯ ತೆರಿಗೆ ಇಲಾಖೆಯು ರೂ. 1,823.08 ಕೋಟಿ ರೂಪಾಯಿಯನ್ನು ಪಾವತಿಸುವಂತೆ ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ನೋಟಿಸ್ ಕುರಿತು ರಾಹುಲ್ ಗಾಂಧಿ ಪ್ರತಿಕ್ರಿಯಿಸುತ್ತಿದ್ದರು.
ಲೋಕಸಭಾ ಚುನಾವಣೆಗೂ ಮುನ್ನ ವಿರೋಧ ಪಕ್ಷಗಳನ್ನು ಕುಂಠಿತಗೊಳಿಸಲು ಆಡಳಿತಾರೂಢ ಬಿಜೆಪಿ ಸರಕಾರವು ತೆರಿಗೆ ಭಯೋತ್ಪಾದನೆ ನಡೆಸುತ್ತಿದೆ ಎಂದು ಇದಕ್ಕೂ ಮುನ್ನ ಕಾಂಗ್ರೆಸ್ ದೂರಿತ್ತು.