ಒಕ್ಕೂಟವಾದದ ರಕ್ಷಣೆಗಾಗಿ ಹೋರಾಟ : ದಿಲ್ಲಿಯಲ್ಲಿ ಕೇಂದ್ರದ ವಿರುದ್ಧ ಎಡರಂಗ ಮತ್ತು ಡಿಎಂಕೆ ಪ್ರತಿಭಟನೆ

Update: 2024-02-08 14:35 GMT

Photo:  PTI 

ಹೊಸದಿಲ್ಲಿ : ತಮ್ಮ ರಾಜ್ಯಗಳಿಗೆ ಹಣಕಾಸು ಹಂಚಿಕೆಯಲ್ಲಿ ನಿರ್ಲಕ್ಷ್ಯ ಮತ್ತು ತಾರತಮ್ಯವನ್ನು ಆರೋಪಿಸಿ ಕೇರಳದ ಎಡರಂಗ ಮತ್ತು ತಮಿಳುನಾಡಿನ ಡಿಎಂಕೆ ಗುರುವಾರ ದಿಲ್ಲಿಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧ ಪ್ರತ್ಯೇಕ ಪ್ರತಿಭಟನೆಗಳನ್ನು ನಡೆಸಿದವು.

ಎಲ್ಡಿಎಫ್ ಪ್ರತಿಭಟನೆಯ ನೇತೃತ್ವವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಹಿಸಿದ್ದು, ಎಡರಂಗದ ಸಚಿವರು, ಶಾಸಕರು ಮತ್ತು ಸಂಸದರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಜಯನ್, 'ನಮ್ಮ ಪ್ರಬಲ ಪ್ರತಿಭಟನೆಯನ್ನು ದಾಖಲಿಸಲು ಮತ್ತು ಭಾರತದ ಒಕ್ಕೂಟ ವ್ಯವಸ್ಥೆಯನ್ನು ಸಂರಕ್ಷಿಸಲು ನಾವು ಇಲ್ಲಿ ಒಗ್ಗೂಡಿದ್ದೇವೆ. ಎಲ್ಲ ರಾಜ್ಯಗಳ ಸಮಾನ ಪರಿಗಣನೆಯನ್ನು ಖಚಿತಪಡಿಸುವ ಪುನರ್ಸಂಘಟಿತ ಹೋರಾಟವನ್ನು ನಾವಿಂದು ಆರಂಭಿಸುತ್ತಿದ್ದೇವೆ. ಈ ಹೋರಾಟವು ಕೇಂದ್ರ-ರಾಜ್ಯ ಸಂಬಂಧದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲೂ ಶ್ರಮಿಸಲಿದೆ. ಭಾರತದ ಇತಿಹಾಸದಲ್ಲಿ ಫೆ.8 ಕೆಂಪು ಅಕ್ಷರಗಳ ದಿನವಾಗಲಿದೆ ’ ಎಂದು ಹೇಳಿದರು.

ಕೇರಳದ ವಿರುದ್ಧ ಕೇಂದ್ರದ ತಾರತಮ್ಯ ಮತ್ತು ಅದರ ಪರಿಣಾಮವಾಗಿ ಆರ್ಥಿಕ ಮುಗ್ಗಟ್ಟು ರಾಜ್ಯವು ಪ್ರತಿಭಟನಾ ಮಾರ್ಗವನ್ನು ತುಳಿಯುವುದನ್ನು ಅನಿವಾರ್ಯವಾಗಿಸಿದೆ ಎಂದು ಬುಧವಾರ ಹೇಳಿದ್ದ ವಿಜಯನ್,ಕೇಂದ್ರ ಸರಕಾರದ ಕ್ರಮಗಳು ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸಿವೆ ಎಂದು ಆರೋಪಿಸಿದ್ದರು.

ರಾಜ್ಯದ ಆರ್ಥಿಕ ಮುಗ್ಗಟ್ಟಿಗೆ ಕೇಂದ್ರ ಸರಕಾರವನ್ನು ದೂಷಿಸುತ್ತಿರುವ ಎಡರಂಗ ಸರಕಾರವು ತನ್ನ ಬಜೆಟ್ ನಲ್ಲಿ ಕೇಂದ್ರದ ವಿರುದ್ಧ ದಾಳಿ ನಡೆಸಿದೆ. ಕೇಂದ್ರವು ಕೇರಳವನ್ನು ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಆರ್ಥಿಕ ಮುಗ್ಗಟ್ಟಿನತ್ತ ತಳ್ಳುತ್ತಿದೆ ಎಂದು ಅದು ಆರೋಪಿಸಿದೆ.

ರಾಜ್ಯದ ಎಲ್ಲ ಹಣಕಾಸು ಸಮಸ್ಯೆಗಳಿಗೆ ಕೇಂದ್ರವನ್ನು ದೂಷಿಸುವ ಎಡರಂಗದ ಧೋರಣೆಯನ್ನು ತಾನು ಒಪ್ಪಿಕೊಳ್ಳುವುದಿಲ್ಲ ಎಂದಿರುವ ಕೇರಳದ ಯುಡಿಎಫ್ ಪ್ರತಿಭಟನೆಯಿಂದ ಪಾಲ್ಗೊಳ್ಳಲು ನಿರಾಕರಿಸಿತ್ತು.

ಬೆಳಿಗ್ಗೆ ವಿಜಯನ್,ಎಡರಂಗದ ಶಾಸಕರು,ಸಂಸದರು ಮತ್ತು ಹಿರಿಯ ನಾಯಕರು ತೀವ್ರ ಚಳಿಯನ್ನೂ ಲೆಕ್ಕಿಸದೆ ಕೇರಳ ಹೌಸ್ನಿಂದ ಜಂತರ್ ಮಂತರ್ವರೆಗೆ ಪ್ರತಿಭಟನಾ ಜಾಥಾ ನಡೆಸಿದರು.

ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ,ಜಮ್ಮು-ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ತಮಿಳುನಾಡಿನ ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲ್ ಸೇವೆಗಳ ಸಚಿವ ಪಿ.ತ್ಯಾಗರಾಜನ್ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರೂ ಪಾಲ್ಗೊಂಡಿದ್ದರು.

ಡಿಎಂಕೆ ಪ್ರತಿಭಟನೆ

2024-25ನೇ ಸಾಲಿನ ಮಧ್ಯಂತರ ಬಜೆಟ್ನಲ್ಲಿ ತಮಿಳುನಾಡಿಗೆ ಅಗತ್ಯ ಹಣಕಾಸನ್ನು ಹಂಚಿಕೆ ಮಾಡದಿರುವುದನ್ನು ವಿರೋಧಿಸಿ ಸಂಸದೀಯ ಪಕ್ಷದ ನಾಯಕ ಟಿ.ಆರ್.ಬಾಲು ನೇತೃತ್ವದಲ್ಲಿ ಡಿಎಂಕೆ ಮತ್ತು ಮಿತ್ರಪಕ್ಷಗಳ ಸಂಸದರು ಗುರುವಾರ ಕಪ್ಪು ಅಂಗಿಗಳನ್ನು ಧರಿಸಿಕೊಂಡು ಸಂಸತ್ ಸಂಕೀರ್ಣದಲ್ಲಿಯ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆಯನ್ನು ನಡೆಸಿದರು. ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವು ತಮಿಳುನಾಡು ವಿರುದ್ಧ ತಾರತಮ್ಯವನ್ನು ಎಸಗುತ್ತಿದೆ. ಇತ್ತೀಚಿನ ಚಂಡಮಾರುತ, ಮಳೆ ಮತ್ತು ಪ್ರವಾಹದಿಂದ ಹಾನಿಯಿಂದಾಗಿ ಉದ್ಭವಿಸಿರುವ ಪರಿಸ್ಥಿತಿಯನ್ನು ನಿಭಾಯಿಸಲು ತಮಿಳುನಾಡಿಗೆ ಸೂಕ್ತ ಹಣಕಾಸು ಹಂಚಿಕೆ ಮಾಡಿಲ್ಲ ಎಂದು ಡಿಎಂಕೆ ಆರೋಪಿಸಿದೆ.

2023 ಡಿಸೆಂಬರ್ನಲ್ಲಿ ಚಂಡಮಾರುತ,ಹಿಂದೆಂದೂ ಕಂಡರಿಯದ ಮಳೆ ಮತ್ತು ಪ್ರವಾಹದ ಬಳಿಕ ಸುಮಾರು 37,000 ಕೋ.ರೂ.ಗಳ ಪರಿಹಾರಕ್ಕಾಗಿ ತಮಿಳುನಾಡಿನ ಮನವಿಗೆ ಸಂಬಂಧಿಸಿದಂತೆ ಮಧ್ಯಂತರ ಬಜೆಟ್ ನಲ್ಲಿ ಯಾವುದೇ ಪ್ರಕಟಣೆಯಿಲ್ಲ. ಮದುರೈನಲ್ಲಿ ಏಮ್ಸ್ ಸ್ಥಾಪನೆ ಸೇರಿದಂತೆ ತಮಿಳುನಾಡಿನ ಅಭಿವೃದ್ಧಿ ಯೋಜನೆಗಳಿಗೂ ಬಜೆಟ್ ನಲ್ಲಿ ಹಂಚಿಕೆ ಮಾಡಲಾಗಿಲ್ಲ ಎಂದು ಡಿಎಂಕೆ ಹೇಳಿದೆ.

ಡಿಎಂಕೆ ಮತ್ತು ಮಿತ್ರಪಕ್ಷಗಳ ಸಂಸದರು ನೀಟ್ ಪರೀಕ್ಷೆ ಮತ್ತು ಜಿಎಸ್ಟಿಯನ್ನು ರದ್ದುಗೊಳಿಸುವಂತೆ ಕೇಂದ್ರವನ್ನು ಆಗ್ರಹಿಸಿ ಘೋಷಣೆಗಳನ್ನೂ ಕೂಗಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News