2025-26 ಶೈಕ್ಷಣಿಕ ವರ್ಷದಿಂದ 10 ಮತ್ತು12ನೇ ತರಗತಿ ವಿದ್ಯಾರ್ಥಿಗಳಿಗೆ 2 ಬಾರಿ ಬೋರ್ಡ್ ಪರೀಕ್ಷೆಗೆ ಹಾಜರಾಗುವ ಅವಕಾಶ: ಕೇಂದ್ರ ಶಿಕ್ಷಣ ಸಚಿವ
ಹೊಸದಿಲ್ಲಿ: ಶೈಕ್ಷಣಿಕ ವರ್ಷ 2025-26ರಿಂದ 10ನೇ ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳಿಗೆ ಎರಡು ಬಾರಿ ಹಾಜರಾಗುವ ಆಯ್ಕೆ ವಿದ್ಯಾರ್ಥಿಗಳಿಗಿರಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.
ಪಿಎಂ ಶ್ರೀ (ಪ್ರೈಮ್ ಮಿನಿಸ್ಟರ್ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ) ಯೋಜನೆಗೆ ಛತ್ತೀಸಗಢದಲ್ಲಿ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಈ ಯೋಜನೆಯಡಿ ರಾಜ್ಯದ 211 ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುವುದು.
ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಒತ್ತಡ ಕಡಿಮೆಗೊಳಿಸುವುದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020 ನ ಉದ್ದೇಶಗಳಲ್ಲಿ ಒಂದು ಎಂದು ಅವರು ಹೇಳಿದರು.
ಹೊಸ ಪಠ್ಯಕ್ರಮದ ಪ್ರಕಾರ ಬೋರ್ಡ್ ಪರೀಕ್ಷೆಗಳು ಎರಡು ಬಾರಿ ನಡೆದಾಗ ವಿದ್ಯಾರ್ಥಿಗಳಿಗೆ ಸಮಯಾವಕಾಶ ಜೊತೆಗೆ ಉತ್ತಮ ಕಾರ್ಯನಿರ್ವಹಣೆ ತೋರುವ ಅವಕಾಶ ದೊರೆತು ಯಾವ ಪರೀಕ್ಷೆಯಲ್ಲಿ ಉತ್ತಮ ಅಂಕಗಳು ದೊರಕಿವೆ, ಆ ಅಂಕಗಳನ್ನು ಉಳಿಸಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.
ಶಾಲೆಗಳಲ್ಲಿ ಪ್ರತಿ ವರ್ಷ 10 ಬ್ಯಾಗ್ ರಹಿತ ದಿನಗಳನ್ನು ಪರಿಚಯಿಸುವ ಕುರಿತು ಮಾತನಾಡಿದ ಅವರು ವಿದ್ಯಾರ್ಥಿಗಳು ಕಲೆ, ಸಂಸ್ಕೃತಿ, ಕ್ರೀಡೆ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.